
ವಿಟ್ಲ: ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿಯ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದಿನಾಂಕ 26.06.2026 ರಂದು ರಾತ್ರಿ ವೇಳೆ, ಪೊಲೀಸ್ ನಿರೀಕ್ಷಕರಾದ ಪ್ರಕಾಶ ದೇವಾಡಿಗ ರವರಿಗೆ ವಿಟ್ಲ ಮಂಗಿಲಪದವು ಬಸ್ ತಂಗುದಾಣದ ಬಳಿ ಅಕ್ರಮ ಮದ್ಯ ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ, ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ, ವ್ಯಕ್ತಿಯೋರ್ವನು ಮಂಗಿಲಪದವು ಬಸ್ ತಂಗುದಾಣದ ಬಳಿ ಅನುಮಾನಾಸ್ಪದವಾಗಿ ಕಂಡುಬಂದಿದ್ದು ಆತನನ್ನು ಹಿಡಿದು ವಿಚಾರಿಸಿದಾಗ ಆತನು ವಿಟ್ಲ ಕಸಬಾ ನಿವಾಸಿ ಲಕ್ಷ್ಮಣಗೌಡ (54) ಎಂಬುದಾಗಿ ತಿಳಿಸಿರುತ್ತಾನೆ. ಆತನ ಬಳಿಯಿದ್ದ ಚೀಲವನ್ನು ತಪಾಸಣೆ ನಡೆಸಿದಾಗ ವಿವಿಧ ಮಾದರಿಯ ಒಟ್ಟು 4.5 ಲೀಟರ್ ಮದ್ಯ ಹಾಗೂ ಮದ್ಯ ಮಾರಾಟದಿಂದ ಸಂಗ್ರಹವಾದ 300 ರೂಪಾಯಿ ಪತ್ತೆಯಾಗಿರುತ್ತದೆ. ಈ ಬಗ್ಗೆ ವಿಚಾರಿಸಿದಾಗ ಆರೋಪಿಯು ಯಾವುದೇ ಪರವಾನಿಗೆ ಇಲ್ಲದೇ ಗಿರಾಕಿಗಳಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಸಲುವಾಗಿ ತನ್ನ ಸ್ವಾಧೀನದಲ್ಲಿರಿಸಿಕೊಂಡಿರುವುದಾಗಿ ದೃಢಪಟ್ಟಿದ್ದು, ಮದ್ಯವನ್ನು ಸ್ವಾಧೀನಪಡಿಸಿ, ಆರೋಪಿಯ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.


