ಬೆಳ್ಳಾರೆ; ಯುವತಿಗೆ ಲೈಂಗಿಕ ಕಿರುಕುಳ ನೀಡಿ, ಜಾತಿ ನಿಂದನೆ ಆರೋಪದಡಿ ಚಿಕನ್ ಸೆಂಟರ್ ಮಾಲೀಕರೊಬ್ಬರ ವಿರುದ್ಧ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೂನ್ 8ರಂದು ಈ ಬಗ್ಗೆ ಯುವತಿ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ದೂರಿನಲ್ಲಿ ತಾನು ಬೆಳ್ಳಾರೆಯ ಖಾಸಗಿ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಜೂನ್ 2ರಂದು ಕೆಲಸ ಮುಗಿಸಿ ಸಂಜೆ ಸುಳ್ಯ ಕಡೆಗೆ ತೆರಳುವ ಬಸ್ಸಿನಲ್ಲಿ ಪ್ರಯಾಣಿಸಿ ಕಲ್ಲೋಣಿಯಲ್ಲಿ ಇಳಿದು ಮನೆಗೆ ನಡೆದುಕೊಂಡು ಹೋಗುತ್ತಿದ್ದ ವೇಳೆ, ಪರಿಚಯಸ್ಥನಾದ ಪ್ರಸಾದ್ ಕಾರಿನಲ್ಲಿ ಬಂದು ಮನೆಗೆ ಬಿಡುವುದಾಗಿ ಹೇಳಿ ತನ್ನನ್ನು ಕಾರಿನಲ್ಲಿ ಕರೆದೊಯ್ದಿದ್ದಾನೆ.
ಸುಮಾರು 2 ಕಿಲೋಮೀಟರ್ ದೂರ ಸಾಗಿದ ಬಳಿಕ ಪ್ರಸಾದ್ ತನ್ನ ಎದೆ, ಕೆನ್ನೆ, ಮುಖ ಹಾಗೂ ಸೊಂಟವನ್ನು ಅನಗತ್ಯವಾಗಿ ಸ್ಪರ್ಶಿಸಿ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಯುವತಿ ಆರೋಪಿಸಿದ್ದಾರೆ. ತಾನು ವಿರೋಧ ವ್ಯಕ್ತಪಡಿಸಿದಾಗ ಜಾತಿ ನಿಂದನೆ ಮಾಡಿ, ಈ ವಿಷಯವನ್ನು ಮನೆಯವರಿಗೆ ಅಥವಾ ಪೊಲೀಸರಿಗೆ ತಿಳಿಸಿದರೆ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಯುವತಿ ನೀಡಿದ ದೂರಿನ ಆಧಾರದ ಮೇಲೆ ಬೆಳ್ಳಾರೆ ಪೊಲೀಸರು ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ನಡೆಸುತ್ತಿದ್ದಾರೆ.


