ಮೈಸೂರು; ಗೋವಾ ಫಿಲ್ಮ್ ಫೆಸ್ಟಿವಲ್ ನಲ್ಲಿ ಕಾಂತಾರ ಸಿನಿಮಾದ ದೈವ ಪಾತ್ರಕ್ಕೆ ಅವಮಾನವೆಸಗಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಾಲಿವುಡ್ ನಟ ರಣವೀರ್ ಸಿಂಗ್ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ತೆರಳಿ ಕ್ಷಮೆಯಾಚಿಸಿದ್ದಾರೆ.
ರಣವೀರ್ ಸಿಂಗ್ ಯಾರಿಗೂ ತಿಳಿಯದಂತೆ ಮೈಸೂರು ಚಾಮುಂಡೇಶ್ವರಿ ಬೆಟ್ಟಕ್ಕೆ ತೆರಳಿ ಪೂಜೆ ಸಲ್ಲಿಸಿ, ಕ್ಷಮೆಯಾಚಿಸಿದ್ದಾರೆ. ತಾಯಿ ಎದುರು ಕುಳಿತು ತಲೆಬಾಗಿ ಕ್ಷಮೆ ಕೇಳಿರುವ ಕೆಲ ದೃಶ್ಯಗಳು ವೈರಲ್ ಆಗಿವೆ.
ಈ ಪ್ರಕರಣ ಸಂಬಂಧ ಹೈಕೋರ್ಟ್ ವಿಚಾರಣೆ ನಡೆಸುತ್ತಿದ್ದಾಗ, ರಣವೀರ್ ಸಿಂಗ್ ಸ್ವತಃ ಎಕ್ಸ್ ನಲ್ಲಿ ಕ್ಷಮೆ ಕೇಳಿದ್ದರು. ಜೊತೆಗೆ ಚಾಮುಂಡೇಶ್ವರಿ ದೇವಾಲಯಕ್ಕೆ ಭೇಟಿ ನೀಡಿ, ಕ್ಷಮೆ ಕೇಳುವುದಾಗಿ ತಿಳಿಸಿದ್ದರು. ಗೋವಾ ಫಿಲ್ಮ್ ಫೆಸ್ಟಿವಲ್ ನಲ್ಲಿ ಕಾಂತಾರ ಸಿನಿಮಾದ ಬಗ್ಗೆ ಮಾತನಾಡುತ್ತಾ ರಣ್ವೀರ್ ಸಿಂಗ್ ರಿಷಬ್ ಅವರ ಕಾಂತಾರ ಸಿನಿಮಾವನ್ನ ಥಿಯೇಟರ್‌ನಲ್ಲಿ ನಾನು ನೋಡಿದೆ. ಅದ್ಭುತವಾಗಿತ್ತು ನಿಮ್ಮ ನಟನೆ. ಅದರಲ್ಲೂ ಹೆಣ್ಣು ದೆವ್ವ ನಿಮ್ಮ ಮೈಸೇರುವ ದೃಶ್ಯವಂತೂ ಅತ್ಯದ್ಭುತವಾಗಿತ್ತು. ಆ ದೃಶ್ಯದಲ್ಲಿ ನಿಮ್ಮ ನಟನೆ ಹಾಗೂ ನಿಮ್ಮ ನೋಟ ಮಜವಾಗಿತ್ತು ಅಂತ ರಣವೀರ್ ಸಿಂಗ್ ಅನುಕರಣೆ ಮಾಡಿದ್ದರು. ರಣವೀರ್ ಮಾಡಿದ ಅಪಹಾಸ್ಯಕ್ಕೆ ದೈವಾರಾಧಕರು ಆಕ್ರೋಶ ಹೊರಹಾಕಿದ್ದರು.ಇದೀಗ ಚಾಮುಂಡಿ ಬೆಟ್ಟಕ್ಕೆ ತೆರಳಿ ಕ್ಷಮೆಯಾಚಿಸಿದ್ದಾರೆ.


