ಮಂಗಳೂರು: ರಿಯಲ್ ಎಸ್ಟೇಟ್ ಸಂಸ್ಥೆ ‘ಲ್ಯಾಂಡ್ ಲಿಂಕ್ಸ್’ ಮಂಗಳೂರಿನ ನಾಲ್ಕು ಪ್ರಮುಖ ಸ್ಥಳಗಳಾದ ಮೇರಿಹಿಲ್, ಮೊರ್ಗನ್ಸ್ ಗೇಟ್, ಸುರತ್ಕಲ್ ಮತ್ತು ಜೆಪ್ಪಿನಮೊಗರಿನಲ್ಲಿ ಅತ್ಯಾಧುನಿಕ ಸಭಾಭವನಗಳನ್ನು ನಿರ್ಮಿಸಿದ್ದು, ಸಭಾಭವನವನ್ನು ಆಂಧ್ರ ಪ್ರದೇಶದ ರಾಜ್ಯಪಾಲರಾದ ನ್ಯಾ. ಎಸ್.ಅಬ್ದುಲ್ ನಝೀರ್ ಅವರು ಏಕಕಾಲಕ್ಕೆ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್ ನೇತೃತ್ವದಲ್ಲಿ ನಿರ್ಮಾಣವಾದ ಈ ಸಭಾಂಗಣಗಳು ಸಾಮಾಜಿಕ ಹಾಗೂ ಶೈಕ್ಷಣಿಕ ಚಟುವಟಿಕೆಗಳಿಗೆ ಬಳಕೆಯಾಗಲಿ ಎಂದು ಶುಭ ಹಾರೈಸಿದರು.
ಮುಖ್ಯ ಅತಿಥಿಯಾಗಿದ್ದ ಕೇಂದ್ರ ಸಚಿವ ವಿ. ಸೋಮಣ್ಣ ಅವರು ಪಾಲೆಮಾರ್ ಅವರ ಸಮಾಜಮುಖಿ ಚಿಂತನೆಯನ್ನು ಶ್ಲಾಘಿಸಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕೃಷ್ಣ ಜೆ. ಪಾಲೆಮಾರ್ ಅವರು, ಜನಸಾಮಾನ್ಯರಿಗೂ ಕೈಗೆಟುಕುವ ದರದಲ್ಲಿ ಈ ಸಭಾಂಗಣಗಳನ್ನು ನಿರ್ಮಿಸಲಾಗಿದ್ದು, ಇದರಿಂದ ಬರುವ ಆದಾಯದ ಹೆಚ್ಚಿನ ಪಾಲನ್ನು ವಿಕಾಸ ಎಜುಕೇಶನ್ ಟ್ರಸ್ಟ್ ಮೂಲಕ ಬಡವರ ಶಿಕ್ಷಣಕ್ಕಾಗಿ ವಿನಿಯೋಗಿಸಲಾಗುವುದು ಎಂದು ತಿಳಿಸಿದರು.


