ಬೆಂಗಳೂರು: ರಾಜಧಾನಿಯ ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಸಾಧನಾ ಶೆಟ್ಟಿ ವಿರುದ್ಧ ಕೇಳಿಬಂದಿದ್ದ 1.5 ಕೋಟಿ ರೂ. ಬ್ಲ್ಯಾಕ್‌ಮೇಲ್ ಪ್ರಕರಣ ಈಗ ರೋಚಕ ತಿರುವು ಪಡೆದುಕೊಂಡಿದೆ. ತನ್ನ ಪತಿ ಕಾರ್ತಿಕ್ ಸೃಷ್ಟಿಸಿದ್ದ ‘ಬ್ಲ್ಯಾಕ್‌ಮೇಲ್’ ಕಥೆಯ ಅಸಲಿಯತ್ತನ್ನು ಆತನ ಪತ್ನಿ ಹರ್ಷಿತಾ ಅವರೇ ಪೊಲೀಸರ ಮುಂದೆ ಬಿಚ್ಚಿಟ್ಟಿದ್ದಾರೆ.
ತಾನು ‘ಹೆಚ್‌ಕೆ ಪರ್ಮನೆಂಟ್ ಮೇಕ್ ಅಪ್ ಕ್ಲಿನಿಕ್’ ಮಾಲೀಕ ಎಂದು ಹೇಳಿಕೊಂಡು ತಿರುಗಾಡುತ್ತಿದ್ದ ಕಾರ್ತಿಕ್, ಸಾಧನಾ ಶೆಟ್ಟಿ ತನಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದ. ಆದರೆ, ಹರ್ಷಿತಾ ನೀಡಿರುವ ಹೇಳಿಕೆಯ ಪ್ರಕಾರ, ಕಾರ್ತಿಕ್ ಒಬ್ಬ ದೊಡ್ಡ ಉದ್ಯಮಿಯಲ್ಲ, ಬದಲಿಗೆ ಆತ ಕ್ಲಿನಿಕ್‌ನಲ್ಲಿ ಮಾರ್ಕೆಟಿಂಗ್ ಕೆಲಸ ನೋಡಿಕೊಳ್ಳುತ್ತಿದ್ದ ಒಬ್ಬ ಸಾಮಾನ್ಯ ಉದ್ಯೋಗಿ ಮಾತ್ರ.
ಪತ್ನಿ ಬಿಚ್ಚಿಟ್ಟ ಸ್ಫೋಟಕ ಸತ್ಯಗಳು: ಮದುವೆಯಾಗುವುದಾಗಿ ನಂಬಿಸಿ ಕಾರ್ತಿಕ್, ಸಾಧನಾ ಶೆಟ್ಟಿಯನ್ನು ಹೈದರಾಬಾದ್, ಬೆಂಗಳೂರು ಮತ್ತು ಮಾಲ್ಡೀವ್ಸ್‌ಗೆ ಕರೆದೊಯ್ದಿದ್ದ. ಅಷ್ಟೇ ಅಲ್ಲದೆ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಇನ್ನು ಸಾಧನಾ ಶೆಟ್ಟಿ ತನ್ನ ವಿರುದ್ಧ ದೂರು ನೀಡಬಹುದು ಎಂಬ ಭಯದಿಂದ, ಕಾರ್ತಿಕ್ ತನ್ನ ಸ್ನೇಹಿತರ ಸಹಾಯದಿಂದ ಆಕೆಯ ಫೋನ್ ಕಳವು ಮಾಡಿಸಿದ್ದ. ನಂತರ ಆಕೆಯನ್ನೇ ಅಪರಾಧಿಯನ್ನಾಗಿ ಬಿಂಬಿಸಲು ‘ಬ್ಲ್ಯಾಕ್‌ಮೇಲ್’ ನಾಟಕವಾಡಿದ್ದ ಎಂದು ಹರ್ಷಿತಾ ಆರೋಪಿಸಿದ್ದಾರೆ.
ಕಾರ್ತಿಕ್ ಕೇವಲ ಸಾಧನಾ ಮಾತ್ರವಲ್ಲದೆ ಇನ್ನೂ ಅನೇಕ ಯುವತಿಯರಿಗೆ ಇದೇ ರೀತಿ ವಂಚಿಸಿರುವ ಸಾಕ್ಷ್ಯಗಳು ಸಿಕ್ಕಿವೆ ಎಂದು ತಿಳಿದುಬಂದಿದೆ. ಪತಿಯ ನಡವಳಿಕೆಯಿಂದ ಬೇಸತ್ತು ಕಳೆದ ಎರಡು ತಿಂಗಳಿಂದ ದೂರವಿದ್ದ ಹರ್ಷಿತಾ, ಈಗ ಪತಿಯ ವಿರುದ್ಧವೇ ಸಾಕ್ಷ್ಯಗಳನ್ನು ಸಂಗ್ರಹಿಸಿ ಪೊಲೀಸರಿಗೆ ನೀಡಿದ್ದಾರೆ. ಸದ್ಯ ಈ ಪ್ರಕರಣದ ಎಲ್ಲಾ ದಾಖಲೆಗಳನ್ನು ಕರ್ನಾಟಕ ಮತ್ತು ತೆಲಂಗಾಣ ಡಿಐಜಿ ಸೇರಿದಂತೆ ರಾಷ್ಟ್ರೀಯ ಮಹಿಳಾ ಆಯೋಗಕ್ಕೂ ರವಾನಿಸಲಾಗಿದೆ.
ಒಟ್ಟಿನಲ್ಲಿ, ಪರ ಸ್ತ್ರೀಯರ ಜೊತೆ ಸಂಬಂಧವಿಟ್ಟುಕೊಂಡು ಅವರಿಗೆ ವಂಚಿಸಿ, ಉಲ್ಟಾ ಅವರ ಮೇಲೆಯೇ ಕೇಸ್ ದಾಖಲಿಸಿದ್ದ ಪತಿಗೆ ಈಗ ಸ್ವಂತ ಪತ್ನಿಯೇ ತಕ್ಕ ಪಾಠ ಕಲಿಸಲು ಮುಂದಾಗಿದ್ದಾರೆ. ಜಯನಗರ ಪೊಲೀಸರು ಈ ಬಗ್ಗೆ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.


