Saturday, June 6, 2026
Homeಕರಾವಳಿಉಡುಪಿಉಡುಪಿ: ಮಹಿಳೆಯನ್ನು ಉಸಿರುಗಟ್ಟಿಸಿ ಕೊಲೆ ಮಾಡಲು ಯತ್ನಿಸಿದ್ದ ಪ್ರಕರಣ; ಇಬ್ಬರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ...

ಉಡುಪಿ: ಮಹಿಳೆಯನ್ನು ಉಸಿರುಗಟ್ಟಿಸಿ ಕೊಲೆ ಮಾಡಲು ಯತ್ನಿಸಿದ್ದ ಪ್ರಕರಣ; ಇಬ್ಬರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ಕೋರ್ಟ್ ಆದೇಶ

- Advertisement -
- Advertisement -

ಉಡುಪಿ: ಮಹಿಳೆಯನ್ನು ಉಸಿರುಗಟ್ಟಿಸಿ ಕೊಲೆ ಮಾಡಲು ಯತ್ನಿಸಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಬ್ಬರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ಉಡುಪಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶ ನೀಡಿದೆ.

ಉಡುಪಿಯ ಮಂಚಿ ಕುಮೇರಿ ನಿವಾಸಿ ರಮಾನಾಥ ರೈ ಅವರು ಮಣಿಪಾಲದ ಟೈಗರ್ ಸರ್ಕಲ್ ಸಮೀಪ ನಂದಿನಿ ಮಿಲ್ಕ್ ಪಾರ್ಲರ್ ನಡೆಸುತ್ತಿದ್ದರು. 2022ರ ಫೆಬ್ರವರಿ 18ರಂದು ಅವರು ಅಂಗಡಿಗೆ ತೆರಳಿದ್ದ ವೇಳೆ ಮನೆಯಲ್ಲಿ ಪತ್ನಿ ಸುಮತಿ ಮಾತ್ರ ಇದ್ದರು. ಸಂಜೆ ಸುಮಾರ 7.15ರ ವೇಳೆಗೆ ಸುಮತಿಯವರ ಅಕ್ಕನ ಮಗ ಬೆಳ್ತಂಗಡಿ ನಿವಾಸಿ ಮಿಥುನ್ ಹಾಗೂ ಆತನ ಸ್ನೇಹಿತ ನಾಗೇಶ್ ಮನೆಗೆ ಬಂದು ಬಾಗಿಲು ತಟ್ಟಿದ್ದರು. ಸಂಬಂಧಿಕನಾದ ಕಾರಣ ಸುಮತಿ ಬಾಗಿಲು ತೆರೆದಿದ್ದು, ಇಬ್ಬರೂ ಮನೆ ಒಳಗೆ ನುಗ್ಗಿ ಸುಮತಿಯವರ ಕುತ್ತಿಗೆಯನ್ನು ಹಿಸುಕಿಕೊಂಡು ಕೊಲೆ ಮಾಡಲು ಯತ್ನಿಸಿದ್ದಾರೆ. ಇದರಿಂದ ಸುಮತಿಗೆ ಪ್ರಜ್ಞೆ ತಪ್ಪಿದ್ದು, ಆರೋಪಿಗಳು  ಅವರನ್ನು ಚೀಲದಲ್ಲಿ ಹಾಕಿ ಸೂಟ್‌ಕೇಸ್‌ನಲ್ಲಿ ತುಂಬಿಸಿ ಸ್ಥಳದಿಂದ ಸಾಗಿಸಲು ಯತ್ನಿಸಿದ್ದರು.

ಈ ವೇಳೆ ಮನೆಗೆ ಬಂದ ರಮಾನಾಥ ರೈ ಹಾಗೂ ಅಕ್ಕಪಕ್ಕದವರು ಬಾಗಿಲು ಬಡಿದಾಗ ಆರೋಪಿಗಳು ಅವರನ್ನು ತಳ್ಳಿಹಾಕಿ ಹೊರಗೆ ಓಡಲು ಯತ್ನಿಸಿದ್ದಾರೆ. ಆದರೆ ಸ್ಥಳೀಯರು ಇಬ್ಬರನ್ನೂ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು. ಬಳಿಕ ಮನೆಯಲ್ಲಿದ್ದ ಸೂಟ್‌ಕೇಸ್ ತೆರೆಯುತ್ತಿದ್ದಾಗ ಅದರೊಳಗಿನ ಚೀಲದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಸುಮತಿ ಪತ್ತೆಯಾಗಿದ್ದರು. ತಕ್ಷಣ ಅವರನ್ನು ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸುಮಾರು ಒಂದು ವಾರ ಚಿಕಿತ್ಸೆ ಪಡೆದ ಬಳಿಕ ಚೇತರಿಸಿಕೊಂಡಿದ್ದರು.

ಈ ಸಂಬಂಧ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಿದ ಅಂದಿನ ಪೊಲೀಸ್ ಉಪನಿರೀಕ್ಷಕ ರಾಜಶೇಖರ ವಂದಲಿ ಅವರು ಆರೋಪಿತರ ವಿರುದ್ಧ ಭಾರತೀಯ ದಂಡ ಸಂಹಿತೆ ಕಲಂ 449, 325, 307 ಹಾಗೂ 34ರಡಿ ಆರೋಪಪಟ್ಟಿ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ಉಡುಪಿಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕಿರಣ್ ಎಸ್. ಗಂಗಣ್ಣವರ್ ಅವರು ಆರೋಪಿತರನ್ನು ತಪ್ಪಿತಸ್ಥರೆಂದು ತೀರ್ಮಾನಿಸಿ, ಮಿಥುನ್ ಹಾಗೂ ನಾಗೇಶ್ ಅವರಿಗೆ ಭಾ.ದಂ.ಸಂ ಕಲಂ 449 ಮತ್ತು 307ರಡಿ ಜೀವಾವಧಿ ಶಿಕ್ಷೆ ಹಾಗೂ ತಲಾ ₹20 ಸಾವಿರ ದಂಡ ವಿಧಿಸಿದ್ದಾರೆ. ಜೊತೆಗೆ ಕಲಂ 325ರಡಿ ಐದು ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು ತಲಾ ₹5 ಸಾವಿರ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

ಆರೋಪಿಗಳಿಂದ ವಸೂಲಾದ ದಂಡದ ಮೊತ್ತದಲ್ಲಿ ₹45 ಸಾವಿರವನ್ನು ಗಾಯಾಳು ಸುಮತಿಯವರಿಗೆ ಪರಿಹಾರವಾಗಿ ನೀಡುವಂತೆ ನ್ಯಾಯಾಲಯ ಆದೇಶಿಸಿದೆ. ಪ್ರಕರಣದಲ್ಲಿ ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಜಯರಾಮ ಶೆಟ್ಟಿ ವಾದ ಮಂಡಿಸಿದ್ದರು.

- Advertisement -

Latest News

error: Content is protected !!