ಬೆಂಗಳೂರಿನಲ್ಲಿ ಸುರಿದ ರಣ ಭೀಕರ ಮಳೆಗೆ 8 ಮಂದಿ ಬಲಿಯಾಗಿದ್ದಾರೆ. ಭಾರೀ ಮಳೆಗೆ ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯ ಎಮರ್ಜೆನ್ಸಿ ವಿಭಾಗದ ಬಳಿಯ ಆವರಣ ಗೋಡೆ ಕುಸಿದು ಬಿದ್ದಿದೆ. ಗೋಡೆ ಕುಸಿತದಿಂದಾಗಿ 8 ಮಂದಿ ಮೃತಪಟ್ಟಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಅವಶೇಷಗಳಡಿ ಮತ್ತಷ್ಟು ಮೃತದೇಹಗಳು ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಬೌರಿಂಗ್ ಆಸ್ಪತ್ರೆಯ ಹೊರಗೆ ಬೀದಿಬದಿಯಲ್ಲಿ, ತಳ್ಳುಗಾಡಿಯಲ್ಲಿ, ಫುಟ್‌ಪಾತ್ ಮೇಲೆ ಕೆಲವರು ವ್ಯಾಪಾರ ಮಾಡುತ್ತಿದ್ದರು. ಗೋಡೆ ಕುಸಿತದಿಂದಾಗಿ ವ್ಯಾಪಾರಿಗಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕಾಂಪೌಂಡ್ ಕೆಳಗೆ ಸಿಲುಕಿದ್ದ 3 ಮಕ್ಕಳು ಸೇರಿ 8 ಜನ ಉಸಿರು ಚೆಲ್ಲಿದ್ದಾರೆ. ಮೃತಪಟ್ಟವರ ಪೈಕಿ ಪಾದಚಾರಿಗಳೂ ಇರಬಹುದು ಎಂಬ ಶಂಕೆ ಇದೆ. ಗೋಡೆ ಕುಸಿದ ಬೆನ್ನಲ್ಲೇ ಸ್ಥಳದಲ್ಲಿದ್ದ ಸಾರ್ವಜನಿಕರು ರಕ್ಷಣಾ ಕಾರ್ಯ ನಡೆಸಿ ಕೆಲವರನ್ನ ರಕ್ಷಿಸಿದ್ದಾರೆ .
ದುರಂತ ಘಟನೆ ನಡೆದ ಶಿವಾಜಿನಗರದ ಬೌರಿಂಗ್ ಆಸ್ಪತ್ರೆಗೆ ಸಿಎಂ ಸಿದ್ದರಾಮಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಘಾತ ವ್ಯಕ್ತಪಡಿಸಿದ್ದಾರೆ. ದುರಂತ ಹೇಗಾಯ್ತು, ಯಾರೆಲ್ಲಾ ಇದ್ದರು ಎಂದು ಅಧಿಕಾರಿಗಳಿಂದ ಸಿಎಂ ಸಿದ್ದರಾಮಯ್ಯ ಮಾಹಿತಿ ಪಡೆದಿದ್ದಾರೆ. ಮುಂಜಾಗ್ರತ ಕ್ರಮ ಕೈಗೊಳ್ಳದ ಜಿಬಿಎ ಅಧಿಕಾರಗಳ ಮೇಲೆ ಗರಂ ಆಗಿ ಸಿದ್ದರಾಮಯ್ಯ ಕ್ಲಾಸ್ ತೆಗೆದುಕೊಂಡಿದ್ದಾರೆ. ಬೌರಿಂಗ್ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗಕ್ಕೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದ್ದಾರೆ.


