ಬೆಳ್ತಂಗಡಿ : ಕಳೆದ ಕೆಲ ದಿನಗಳಿಂದ ಗ್ರಾಹಕರಿಗೆ ಸರಿಯಾಗಿ ಗ್ಯಾಸ್ ಸಿಗದೆ ತೊಂದರೆಯಾಗುತ್ತಿದ್ದ ಬಗ್ಗೆ ದೂರು ಬಂದ ಮೇರೆಗೆ ಶ್ರೀ ಮಂಜ ಇಂಡೇನ್ ಗ್ಯಾಸ್ ಕಚೇರಿಗೆ ದಕ್ಷಿಣ ಕನ್ನಡ ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರ ಇಲಾಖೆಯ ಜಂಟಿ ನಿರ್ದೇಶಕರು ಭೇಟಿ ನೀಡಿ ಪರಿಶೀಲನೆ ನಡೆಸಿ ಸಮಸ್ಯೆ ಸರಿಪಡಿಸಲು ಗಡುವು ನೀಡಿದ್ದಾರೆ.

ಬೆಳ್ತಂಗಡಿ ತಾಲೂಕಿನ ಲಾಯಿಲದಲ್ಲಿರುವ ಶ್ರೀ ಮಂಜು ಇಂಡೇನ್ ಗ್ಯಾಸ್ ಕಚೇರಿಗೆ ಎ.29 ರಂದು ಮಧ್ಯಾಹ್ನ ದಕ್ಷಿಣ ಕನ್ನಡ ಜಿಲ್ಲಾ ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರ ಇಲಾಖೆಯ ಜಂಟಿ ನಿರ್ದೇಶಕರಾದ ಡಿ.ನಾಗರಾಜ್ ಭೇಟಿ ನೀಡಿ ಗ್ಯಾಸ್ ಸಮಸ್ಯೆಗಳ ಬಗ್ಗೆ ಪರಿಶೀಲನೆ ನಡೆಸಿದರು. ತಕ್ಷಣ ಗ್ಯಾಸ್ ಸಮಸ್ಯೆಗಳಿಗೆ ಮುಕ್ತಿ ನೀಡಿ ಗ್ರಾಹಕರಿಗೆ ಗ್ಯಾಸ್ ಸರಿಯಾದ ಸಮಯಕ್ಕೆ ಸರಬರಾಜು ಮಾಡುವಂತೆ ತಿಳಿಸಿದ್ದಾರೆ.
ಬಳಿಕ ಕುವೆಟ್ಟು ಗ್ರಾಮದ ಗುರುವಾಯನಕೆರೆ ಶ್ರೀ ಮಂಜು ಇಂಡೇನ್ ಗ್ಯಾಸ್ ಅವರಿಗೆ ಸೇರಿದ ಗೋಡೌನ್ ಗೂ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬೆಳ್ತಂಗಡಿ ಆಹಾರ ನಿರೀಕ್ಷಕ ವಿಶ್ವ.ಕೆ, ಉಪ ತಹಶೀಲ್ದಾರ್ ಸಂತೋಷ್, ಹಾಗೂ ದೂರುದಾರ ಗೋಪಿನಾಥ್ ನಾಯಕ್, ಮಹಮ್ಮದ್ ರಫೀಕ್ ಕೂಡ ಜೊತೆಯಲ್ಲಿದ್ದರು.


