ಮಂಗಳೂರು; ಕರ್ತವ್ಯನಿರತ ಎಎಸ್‌ಐ ಮೇಲೆ ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧಿಗೆ 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ ಮಂಗಳೂರಿನ ತ್ವರಿತಗತಿ ವಿಶೇಷ ನ್ಯಾಯಾಲಯವು ಮಹತ್ವದ ತೀರ್ಪು ನೀಡಿದೆ.ಸುರತ್ಕಲ್ ಕಾನ ನಿವಾಸಿ ಮಹಮ್ಮದ್ ನಿಯಾಜ್ (20) ಶಿಕ್ಷೆಗೆ ಗುರಿಯಾದ ಅಪರಾಧಿ.
ಉರ್ವ ಠಾಣೆಯ ಎಎಸ್‌ಐ ಐತಪ್ಪ ಅವರು ಠಾಣಾಧಿಕಾರಿಯವರ ಆದೇಶದಂತೆ 2017ರ ಏ.5ರಂದು ನಸುಕಿನಲ್ಲಿ ಗಸ್ತು ಕರ್ತವ್ಯಕ್ಕಾಗಿ ಲೇಡಿ ಹಿಲ್ ವೃತ್ತದ ಬಳಿ ತಲುಪಿದಾಗ, ಬೈಕಿನಲ್ಲಿ ಇಬ್ಬರು ಹಿಂಬಾಲಿಸಿದ್ದರು. ಅವರಲ್ಲೊಬ್ಬನಾದ ಶಮೀರ್, ಐತಪ್ಪ ಅವರನ್ನು ‘ನೀವು ಯಾವ ಠಾಣೆ ಯವರು’ ಎಂದು ವಿಚಾರಿಸಿದ್ದ. ಅವರು ಉತ್ತರಿಸುತ್ತಿದ್ದಂತೆಯೇ ಎರಡನೇ ಆರೋಪಿ ಮೊಹಮ್ಮದ್ ನಿಯಾಜ್ ಕಬ್ಬಿಣದ ರಾಡ್‌ನಿಂದ ಅವರ ತಲೆಗೆ ಬಲವಾಗಿ ಹೊಡೆದಿದ್ದ. ಅವರು ನೆಲಕ್ಕೆ ಬಿದ್ದ ಮೇಲೂ ಹೊಡೆದಿದ್ದ. ಆರೋಪಿ ಶಮೀರ್ ಈ ಕೃತ್ಯಕ್ಕೆ ಪ್ರೇರೇಪಿಸಿದ್ದ. ಸಾರ್ವಜನಿಕರು ಸ್ಥಳಕ್ಕೆ ಧಾವಿಸಿದ್ದನ್ನು ನೋಡಿ ಆರೋಪಿಗಳು ಬೈಕಿನಲ್ಲಿ ಪರಾರಿಯಾಗಿದ್ದರು. ಈ ಬಗ್ಗೆ ಉರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖಾಧಿಕಾಯಾಗಿದ್ದ ಎಸಿಪಿ ಉದಯ ಎಂ.ನಾಯಕ್ ದೋಷಾರೋಪಣೆ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಒಟ್ಟು 19 ಸಾಕ್ಷಿದಾರರನ್ನು ವಿಚಾರಿಸಿ, 36 ದಾಖಲೆಗಳನ್ನು ಗುರುತಿಸಲಾಗಿತ್ತು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಮೋಹನ ಜೆ.ಎಸ್. ಅವರು, ಐಪಿಸಿ ಸೆಕ್ಷನ್ 307 (ಕೊಲೆ ಯತ್ನ) ಅಡಿ 7 ವರ್ಷ, ಸೆಕ್ಷನ್ 332 ಮತ್ತು 333ರ ಅಡಿ ಕ್ರಮವಾಗಿ 2 ಮತ್ತು 3 ವರ್ಷಗಳ ಶಿಕ್ಷೆ ಪ್ರಕಟಿಸಿದ್ದಾರೆ. ವಿಧಿಸಲಾದ ದಂಡದ ಮೊತ್ತದಲ್ಲಿ ₹45 ಸಾವಿರವನ್ನು ಸಂತ್ರಸ್ತ ಎಎಸ್‌ಐ ಐತಪ್ಪ ಅವರಿಗೆ ನೀಡುವಂತೆ ಆದೇಶಿಸಲಾಗಿದೆ. ಪ್ರಕರಣದ ಮತ್ತೊಬ್ಬ ಆರೋಪಿ ಶಮೀರ್ ವಿದೇಶಕ್ಕೆ ಪರಾರಿಯಾಗಿದ್ದು, ಆತನ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡಲಾಗಿದೆ.


