ಬಿಹಾರ: ಪ್ರೀತಿಯ ವಿಚಾರಕ್ಕಾಗಿ ಯುವತಿಯೊಬ್ಬಳು ಬರೋಬ್ಬರಿ 100 ಅಡಿ ಎತ್ತರದ ಹೈ-ಟೆನ್ಷನ್ ವಿದ್ಯುತ್ ಗೋಪುರವೇರಿ (Electric Tower) ಆತ್ಮಹತ್ಯೆ ಬೆದರಿಕೆ ಹಾಕಿದ ನಾಟಕೀಯ ಘಟನೆ ಬಿಹಾರದ ವೈಶಾಲಿ ಜಿಲ್ಲೆಯ ಮಹ್ನಾರ್ ಎಂಬಲ್ಲಿ ನಡೆದಿದೆ.
ಪ್ರಿಯಕರ ತನ್ನನ್ನು ಮದುವೆಯಾಗಬೇಕೆಂದು ಪಟ್ಟು ಹಿಡಿದ ಯುವತಿ, ಸುಮಾರು ಒಂಬತ್ತು ಗಂಟೆಗಳ ಕಾಲ ಪೊಲೀಸರು ಹಾಗೂ ಸ್ಥಳೀಯರಲ್ಲಿ ತೀವ್ರ ಆತಂಕ ಮೂಡಿಸಿದ ಬಗ್ಗೆ ವರದಿಯಾಗಿದೆ.
ಘಟನೆಯ ವಿವರ: ಯುವತಿಯೋರ್ವಳು ಮೊಬೈಲ್ ಜೊತೆಗೆ ಗೋಪುರದ ತುತ್ತತುದಿಗೆ ಏರಿದ್ದು, ತನ್ನ ಬೇಡಿಕೆ ಈಡೇರಿಸದಿದ್ದರೆ ಅಲ್ಲಿಂದ ಜಿಗಿಯುವುದಾಗಿ ಬೆದರಿಕೆ ಹಾಕಿದ್ದಳು. ಇದನ್ನು ಕಂಡು ಗಾಬರಿಗೊಂಡ ಸ್ಥಳೀಯರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಧಾವಿಸಿದ ಅಧಿಕಾರಿಗಳು ಅನಾಹುತ ತಡೆಯಲು ತಕ್ಷಣವೇ ವಿದ್ಯುತ್ ಇಲಾಖೆಗೆ ಸೂಚನೆ ನೀಡಿ ಆ ಭಾಗದ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿದರು.
ಭಾವನಾತ್ಮಕವಾಗಿ ಮನವೊಲಿಸಿದ ಪೊಲೀಸರು: ಸ್ಥಳದಲ್ಲಿ ನೂರಾರು ಜನರು ಜಮಾಯಿಸಿದ್ದು, ಪರಿಸ್ಥಿತಿ ಉದ್ವಿಗ್ನಗೊಂಡಿತ್ತು. ಪೊಲೀಸರು ಮೈಕ್ ಮೂಲಕ ಯುವತಿಯ ಮನವೊಲಿಸಲು ಹರಸಾಹಸ ಪಟ್ಟರು. “ನೀನು ಕೆಳಗೆ ಬಾ, ನಿನ್ನ ಮದುವೆ ಮಾಡಿಸಲು ನಾವು ಸಹಾಯ ಮಾಡುತ್ತೇವೆ” ಎಂದು ಪೊಲೀಸ್ ಅಧಿಕಾರಿಯೊಬ್ಬರು ಭಾವನಾತ್ಮಕವಾಗಿ ಮನವಿ ಮಾಡಿದರು. ಮತ್ತೊಬ್ಬ ಅಧಿಕಾರಿ ಫೋನ್ ಮೂಲಕ ನಿರಂತರವಾಗಿ ಆಕೆಯೊಂದಿಗೆ ಮಾತನಾಡಿ ಆಕೆಗೆ ಧೈರ್ಯ ತುಂಬುವ ಕೆಲಸ ಮಾಡಿದರು.
ಸ್ಥಳದಲ್ಲಿ 100ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿತ್ತು. ಕಾರ್ಯಾಚರಣೆ ರಾತ್ರಿಯವರೆಗೂ ಮುಂದುವರಿದ ಕಾರಣ ವಿಶೇಷ ದೀಪಗಳ ವ್ಯವಸ್ಥೆ ಮಾಡಲಾಗಿತ್ತು. ಅಂತಿಮವಾಗಿ, ಒಂಬತ್ತು ಗಂಟೆಗಳ ಸುದೀರ್ಘ ಮಾತುಕತೆಯ ನಂತರ ಯುವತಿಯನ್ನು ಸುರಕ್ಷಿತವಾಗಿ ಕೆಳಗೆ ಇಳಿಸುವಲ್ಲಿ ಪೊಲೀಸರು ಯಶಸ್ವಿಯಾದರು.
ಇನ್ನು ಪೊಲೀಸರು ಪರಿಸ್ಥಿತಿಯನ್ನು ಅರಿತುಕೊಂಡು ಆಕೆಯ ಪ್ರಿಯಕರನನ್ನು ಸ್ಥಳಕ್ಕೆ ಕರೆತಂದಿದ್ದರು. ಸದ್ಯಕ್ಕೆ ಯುವತಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಆದರೆ, ಆಕೆಯ ಬೇಡಿಕೆಯಂತೆ ಮದುವೆ ಇನ್ನೂ ನಡೆದಿಲ್ಲ. ಈ ಸಂಬಂಧ ಪೊಲೀಸರು ಮುಂದಿನ ಕಾನೂನು ಕ್ರಮಗಳನ್ನು ಕೈಗೊಂಡಿದ್ದಾರೆ ಎಂದು ವರದಿಯಾಗಿದೆ.


