ಬೆಂಗಳೂರು: ವಿಪಕ್ಷ ಬಿಜೆಪಿ ಶಾಸಕರೊಬ್ಬರಿಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸದನದಲ್ಲಿ ರೇಪಿಸ್ಟ್ ಎಂದು ಕರೆದ ಘಟನೆ ವಿಧಾನಸಭೆ ಅಧಿವೇಶನದಲ್ಲಿ ಇಂದು ನಡೆದಿದೆ.
ಬೆಂಗಳೂರು ಅಭಿವೃದ್ಧಿ ಕುರಿತು ವಿಧಾನಸಭೆಯಲ್ಲಿ ನಡೆದಿದ್ದ ಚರ್ಚೆಗೆ ಬೆಂಗಳೂರು ನಗರಾಭಿವೃದ್ಧಿ ಇಲಾಖೆ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರಾಜ್ಯ ಸರ್ಕಾರದ ಉತ್ತರವನ್ನು ನೀಡುತ್ತಿದ್ದ ವೇಳೆ ರಾಜರಾಜೇಶ್ವರಿ ನಗರ ಶಾಸಕ ಮುನಿರತ್ನ ಮಧ್ಯ ಪ್ರವೇಶ ಮಾಡಿ ಮಾತನಾಡಿದ್ದರು. ಈ ವೇಳೆ ಶಾಸಕ ಮುನಿರತ್ನ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ನಡುವೆ ಮಾತಿನ ಚಕಮಕಿ ನಡೆದು ಮುನಿರತ್ನಗೆ ಡಿ.ಕೆ. ಶಿವಕುಮಾರ್ ನೀನೊಬ್ಬ ರೇಪಿಸ್ಟ್ ಎಂದು ಹೇಳಿದ್ದಾರೆ.
ಮುನಿರತ್ನ ಬಗ್ಗೆ ಮಾತನಾಡುವುದು ಬೇಕಾದಷ್ಟಿದೆ ಎಂದು ಡಿ.ಕೆ. ಶಿವಕುಮಾರ್ ಹೇಳಿದಾಗ ನನಗೂ ಮಾತನಾಡಬೇಕು ಅವಕಾಶ ಕೊಡಿ ಎಂದು ಸ್ಪೀಕರ್ ಗೆ ಮುನಿರತ್ನ ಮನವಿ ಮಾಡಿದರು. ಆಗ ವಿಪಕ್ಷ ನಾಯಕ ಅಶೋಕ್ ಗೆ ಏಡ್ಸ್ ಇಂಜೆಕ್ಷನ್ ಚುಚ್ಚಲು ಹೋಗಿದ್ದು ಗೊತ್ತಿದೆ ಎಂದು ಡಿಸಿಎಂ ಹೇಳಿದಾಗ ಮಾತಿನ ಚಕಮಕಿ ಜೋರಾಯಿತು.
ಆಗ ನನ್ನ ಮೇಲಿನ ಆರೋಪ ಸಾಬೀತು ಮಾಡಲಿ, ಇವರಿಗೂ ಮೂರು ಮಕ್ಕಳಿದ್ದಾರೆ ಎಂದು ಶಾಸಕ ಮುನಿರತ್ನ ಹೇಳಿದಾಗ ಹೇ ನೀನೊಬ್ಬ ರೇಪಿಸ್ಟ್ ಕುಳಿತುಕೋ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
ಈ ವೇಳೆ ಡಿ.ಕೆ. ಶಿವಕುಮಾರ್ ಪರವಾಗಿ ಸದನದ ಬಾವಿಗೆ ಇಳಿದ ಕಾಂಗ್ರೆಸ್ ಶಾಸಕರು ಮುನಿರತ್ನ ಅವರನ್ನು ಸದನದಿಂದ ಹೊರ ಹಾಕುವಂತೆ ಆಗ್ರಹಿಸಿ ಧರಣಿ ನಡೆಸಿದರು.


