ಉಪ್ಪಿನಂಗಡಿ: ಹಲ್ಲೆ ಪ್ರಕರಣದಲ್ಲಿ 6 ವರ್ಷಗಳಿಂದ ಕೋರ್ಟ್ ಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಉಪ್ಪಿನಂಗಡಿ ಪೊಲೀಸರು ಕೇರಳದಲ್ಲಿ ಬಂಧಿಸಿದ್ದಾರೆ. ಕಡಬ ನಿವಾಸಿ ವಿನೋದ್ @ ಜಾರ್ಜ್ ಕುಟ್ಟಿ ಸೆಬಾಸ್ಟಿಯನ್ ಬಂಧಿತ.
2019ರಲ್ಲಿ ಕೌಕ್ರಾಡಿ ಗ್ರಾಮದ ರಾಯ್ಸ್ ಸಿನಿಮಾ ಥಿಯೇಟರ್ ಬಳಿ ವಿನ್ಸೆಂಟ್ ಎಂಬುವವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿತ್ತು . ಈ ಘಟನೆಗೆ ಸಂಬಂಧಿಸಿದಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು . ಪ್ರಕರಣದಲ್ಲಿ ಎರಡನೇ ಆರೋಪಿಯಾಗಿದ್ದ ಕಡಬ ನಿವಾಸಿ ವಿನೋದ್ @ ಜಾರ್ಜ್ ಕುಟ್ಟಿ ಸೆಬಾಸ್ಟಿಯನ್, ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ.
ಆರೋಪಿಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದ ಉಪ್ಪಿನಂಗಡಿ ಪೊಲೀಸರಿಗೆ ಆತ ಕೇರಳದಲ್ಲಿದ್ದಾನೆ ಎಂಬ ಖಚಿತ ಮಾಹಿತಿ ಲಭ್ಯವಾಗಿತ್ತು . ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿದ ಹೆಡ್ ಕಾನ್ಸ್‌ಟೇಬಲ್ (HC-826) ಶಿವರಾಮ ರೈ ಮತ್ತು ಕಾನ್ಸ್‌ಟೇಬಲ್ (PC-765) ಸಂತೋಷ್ ಕೆ.ಸಿ. ಅವರನ್ನೊಳಗೊಂಡ ತಂಡವು ದಿನಾಂಕ 05-03-2026 ರಂದು ಕೇರಳದ ತ್ರಿಶೂರ್ ಜಿಲ್ಲೆಯ ಇರಿಂಜಲಕುಡ ಎಂಬಲ್ಲಿ ಆರೋಪಿಯನ್ನು ಬಂಧಿಸಿದೆ.
ಬಂಧಿತ ಆರೋಪಿಯನ್ನು ಉಪ್ಪಿನಂಗಡಿ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿತನಿಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದೆ . 6 ವರ್ಷಗಳ ಹಳೆಯ ಪ್ರಕರಣದ ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾದ ಪೊಲೀಸ್ ತಂಡದ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ.


