ವಿಟ್ಲ: ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ನಿರ್ಮಿಸಿದ್ದ ಶೆಡ್‌ನಲ್ಲಿ ಸುಡುಮದ್ದು ಸ್ಫೋಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ವ್ಯಕ್ತಿಯೊಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮುಳ್ಳೂರು ಗ್ರಾಮದ ಕಂಬಳಬೆಟ್ಟು ನಿವಾಸಿ ಅಬ್ದುಲ್ ಗಫೂರ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಅಬ್ದುಲ್ ಗಫೂರ್ ಮುಳ್ಳೂರು ಗ್ರಾಮದ ಕಂಬಳಬೆಟ್ಟು ನೂಜಿ ಪ್ರದೇಶದಲ್ಲಿರುವ ಸರ್ಕಾರಿ ಜಮೀನಿನಲ್ಲಿ ಅಕ್ರಮವಾಗಿ ನಿರ್ಮಿಸಿದ್ದ ಶೆಡ್ ನಿರ್ಮಿಸಿದ್ದರು. ಅದರಲ್ಲಿ ಸುಡುಮದ್ದು ಸ್ಫೋಟಗೊಂಡಿತ್ತು. ಈ ಬಗ್ಗೆ ಬಂಟ್ವಾಳ ತಾಲೂಕಿನ ಅಳಿಕೆ ಗ್ರಾಮದ ಗ್ರಾಮ ಆಡಳಿತಾಧಿಕಾರಿ ಸತೀಶ್ ಸುವರ್ಣ (50) ದೂರು ನೀಡಿದ್ದರು. ಅವರು ವಿಟ್ಲ ಮುನ್ನೂರು ಗ್ರಾಮದ ಪ್ರಭಾರ ಗ್ರಾಮ ಆಡಳಿತಾಧಿಕಾರಿಯಾಗಿದ್ದಾರೆ.
ಮಾ.6 ರಂದು ಸಂಜೆ ಕಂಬಳಬೆಟ್ಟು ನೂಜಿ ಪ್ರದೇಶದಲ್ಲಿ ಸುಡುಮದ್ದು ಸ್ಫೋಟಗೊಂಡಿರುವ ಬಗ್ಗೆ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ, ಅವರು ಕಂದಾಯ ನಿರೀಕ್ಷಕ ರವಿ ಅವರೊಂದಿಗೆ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಈ ವೇಳೆ ಸರ್ಕಾರಿ ಜಮೀನಿನಲ್ಲಿ ಸ್ಥಳೀಯ ನಿವಾಸಿ ಅಬ್ದುಲ್ ಗಫೂರ್ ಅಕ್ರಮವಾಗಿ ಶೆಡ್ ನಿರ್ಮಿಸಿ, ಯಾವುದೇ ಪರವಾನಗಿ ಪಡೆಯದೇ ಸುಡುಮದ್ದುಗಳನ್ನು ತಯಾರಿಸಿ ದಾಸ್ತಾನು ಮಾಡಿಕೊಂಡಿದ್ದರೆಂಬುದು ತಿಳಿದುಬಂದಿದೆ. ನಿರ್ಲಕ್ಷ್ಯ ಹಾಗೂ ಬೇಜಾವಬ್ದಾರಿಯಿಂದ ಸಂಗ್ರಹಿಸಿದ್ದ ಸುಡುಮದ್ದುಗಳು ಸ್ಫೋಟಗೊಂಡ ಪರಿಣಾಮ ಸುತ್ತಮುತ್ತಲಿನ ಮರಗಳು ಸುಟ್ಟು ಹೋಗಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎನ್ನಲಾಗಿದೆ.


