ಸುಳ್ಯ; ಪೋಲೀಸರ ವಶದಿಂದ ಪರಾರಿಯಾದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸುಳ್ಯದ ಎಸ್ ಸಿ ಜೆ ಮತ್ತು ಜೆ ಎಂಎಫ್ ನ್ಯಾಯಾಲಯ ಆರೋಪಿಗೆ ಐದು ವರ್ಷ ಶಿಕ್ಷೆ ವಿಧಿಸಿ ಮಹತ್ವದ ತೀರ್ಪು ನೀಡಿದೆ. ರಾಘವನ್ ಅಲಿಯಾಸ್ ಕೋಳಿಕರಣ್ ಶಿಕ್ಷೆಗೆ ಗುರಿಯಾಗಿರುವ ಆರೋಪಿ.
ಸುಳ್ಯ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಅ ಕ್ರ 118/24 ಕಲಂ: 121(1), 132,262 BNS ಪ್ರಕರಣದಲ್ಲಿ ತನಿಖಾಧಿಕಾರಿಗಳಾಗಿದ್ದ ಸುಳ್ಯ ವೃತ್ತ ನಿರೀಕ್ಷಕರಾದ ತಿಮ್ಮಪ್ಪ ನಾಯ್ಕ ಅವರು ಪ್ರಕರಣದ ತನಿಖೆ ನಡೆಸಿ, ಅಗತ್ಯ ಸಾಕ್ಷಿಗಳನ್ನು ಕಲೆಹಾಕಿ, ಆರೋಪಿ ರಾಘವನ್ ಅಲಿಯಾಸ್ ಕೋಳಿಕರಣ್ ಎಂಬಾತನ ವಿರುದ್ದ ದೋಷಾರೋಪಣೆಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ಸುಳ್ಯದ ಎಸ್ ಸಿ ಜೆ ಮತ್ತು ಜೆ ಎಮ್ ಎಫ್ ಸಿ ನ್ಯಾಯಾಲಯದಲ್ಲಿ ನಡೆದು, ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಧೀಶರಾದ ಬಿ. ಮೋಹನ್ ಬಾಬು ಅವರು ಆರೋಪಿಗೆ ಕಲಂ 121(1) ರಡಿಯಲ್ಲಿ 3 ವರ್ಷಗಳ ಸಾದಾ ಕಾರಾಗೃಹ ಶಿಕ್ಷೆ ಮತ್ತು ರೂ.10,000 ದಂಡ, ದಂಡ ಕಟ್ಟಲು ತಪ್ಪಿದ್ದಲ್ಲಿ 6 ತಿಂಗಳ ಸಾದಾ ಕಾರಾಗೃಹ ಶಿಕ್ಷೆ ವಿಧಿಸಿದ್ದಾರೆ.
ಕಲಂ 132ರಲ್ಲಿ ಸಾರ್ವಜನಿಕ ಕರ್ತವ್ಯಕ್ಕೆ ಅಡ್ಡಿಪಡಿಸಲು ಮಾಡಿದ ಹಲ್ಲೆಗಾಗಿ 1 ವರ್ಷಗಳ ಸಾದಾ ಕಾರಾಗೃಹ ಶಿಕ್ಷೆ ಮತ್ತು 10,000 ರೂ. ದಂಡ, ದಂಡ ಕಟ್ಟಲು ತಪ್ಪಿದ್ದಲ್ಲಿ 3 ತಿಂಗಳ ಸಾದಾ ಕಾರಾಗೃಹ ಶಿಕ್ಷೆ ವಿಧಿಸಿದೆ. ಕಲಂ262 ರಲ್ಲಿ ಕಾನೂನುಬದ್ಧವಾಗಿ ವಶಕ್ಕೆ ಪಡೆಯುವ ಸಂದರ್ಭದಲ್ಲಿ ತಡೆಯುಂಟು ಮಾಡಿದ್ದಕ್ಕಾಗಿ 1 ವರ್ಷಗಳ ಸಾದಾ ಕಾರಾಗೃಹ ಶಿಕ್ಷೆ ಮತ್ತು ರೂ. 10,000 ದಂಡ, ದಂಡ ಕಟ್ಟಲು ತಪ್ಪಿದ್ದಲ್ಲಿ 3 ತಿಂಗಳ ಸಾದಾ ಕಾರಾಗೃಹ ಶಿಕ್ಷೆ ವಿಧಿಸಿದ್ದಾರೆ.ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕರಾದ ಪ್ರೀತಿ ಎಂ.ಸಿ ಅವರು ವಾದ ಮಂಡಿಸಿದ್ದರು.


