Tuesday, June 23, 2026
Homeಕರಾವಳಿಶಿಬಾಜೆಯಲ್ಲಿ ಶ್ರೀಧರ್ ಕೊಲೆ ಪ್ರಕರಣ: ಶಾಸಕ ಹರೀಶ್ ಪೂಂಜ ಫೋನ್ ಪರಿಶೀಲಿಸಿದರೆ ಸತ್ಯಾಸತ್ಯತೆ ಗೊತ್ತಾಗಬಹುದು

ಶಿಬಾಜೆಯಲ್ಲಿ ಶ್ರೀಧರ್ ಕೊಲೆ ಪ್ರಕರಣ: ಶಾಸಕ ಹರೀಶ್ ಪೂಂಜ ಫೋನ್ ಪರಿಶೀಲಿಸಿದರೆ ಸತ್ಯಾಸತ್ಯತೆ ಗೊತ್ತಾಗಬಹುದು

- Advertisement -
- Advertisement -

ಬೆಳ್ತಂಗಡಿ : ಶಿಬಾಜೆಯ ಸಾರಾ ಎಸ್ಟೇಟ್ ನಲ್ಲಿ ನಡೆದ ಶ್ರೀಧರ್ ಮುಗೇರ ಕೊಲೆ ಪ್ರಕರಣವನ್ನು ಎಸ್ಐಟಿ ತನಿಖೆ ನಡೆಸಲು ಅವಕಾಶ ಕಲ್ಪಿಸಿರುವುದನ್ನು ಸ್ವಾಗತಿಸಿ , ಕಳಿಯ ಗ್ರಾಮದಲ್ಲಿ ವರ್ಷಗಳ ಹಿಂದೆ ನಡೆದ ಶ್ರೀಧರ್ ಮುಗೇರರ ಅಸಹಜ ಸಾವಿನ ಬಗ್ಗೆಯೂ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ ಘಟನೆ ಫೆ.22 ರಂದು ನಡೆಯಿತು.

ಬೆಳ್ತಂಗಡಿ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಬೆಳ್ತಂಗಡಿ ಪೋಲಿಸ್ ಉಪ ವಿಭಾಗದ ಡಿವೈಎಸ್ಪಿ ರೋಹಿಣಿ ರವರ ಅಧ್ಯಕ್ಷತೆಯಲ್ಲಿ ಫೆ.22 ರಂದು ಭಾನುವಾರ ನಡೆದ ಮಾಸಿಕ ಪರಿಶಿಷ್ಟ ಜಾತಿ/ಪಂಗಡಗಳ ಕುಂದುಕೊರತೆಗಳ ಸಭೆಯಲ್ಲಿ ಈ ಆಗ್ರಹ ಕೇಳಿಬಂತು.

ಹಿರಿಯ ದಲಿತ ಮುಖಂಡ ಸಂಜೀವ ಆರ್ ಮಾತನಾಡಿ 2022 ರಲ್ಲಿ ನಡೆದ ಶಿಬಾಜೆಯ ಶ್ರೀಧರ್ ಮುಗೇರ ಕೊಲೆ ಪ್ರಕರಣದಲ್ಲಿ ಕೆಲವು ಬಲಾಢ್ಯರಿದ್ದು, ತನಿಖೆ ಹಾದಿ ತಪ್ಪಲು ಕಾರಣವಾಗಿತ್ತು. ಆ ಬಳಿಕ ದಲಿತ ಸಂಘಟನೆಗಳು ವ್ಯಾಪಕ ಪ್ರತಿಭಟನೆ ನಡೆಸಿದ ಬಳಿಕ ರಾಜ್ಯ ಸರ್ಕಾರ ಸಿಐಡಿ ತನಿಖೆ ನಡೆಸಿದರೂ ಯಾವುದೇ ರೀತಿಯ ಪ್ರಯೋಜನವಾಗಲಿಲ್ಲ. ಇದೀಗ ರಾಜ್ಯ ಹೈಕೋರ್ಟ್ ಆದೇಶದಂತೆ ರಾಜ್ಯ ಸರ್ಕಾರ ಎಸ್ಐಟಿ ತನಿಖೆ ನಡೆಸಲು ಆದೇಶಿಸಿರುವುದು ಸ್ವಾಗತರ್ಹ‌. ಸರಿಯಾಗಿ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ ಎಂದು ಒತ್ತಾಯಿಸಿದರು. ಮುಂದುವರಿದು ಮಾತನಾಡಿದ ಅವರು ವರ್ಷಗಳ ಹಿಂದೆ ಕಳಿಯ ಗ್ರಾಮದಲ್ಲಿ ಶ್ರೀಧರ್ ಮುಗೇರ ಎಂಬವರ ಮೃತದೇಹ ಸಂಶಯಾಸ್ಪದವಾಗಿ ಕೆರೆಯಲ್ಲಿ ಪತ್ತೆಯಾಗಿತ್ತು , ಪ್ರಕರಣಕ್ಕೆ ಸಂಬಂಧಿಸಿದಂತೆ ಅಸಹಜ ಸಾವು ಎಂದು ದಾಖಲಾಗಿದ್ದರೂ ತನಿಖೆ ಸರಿಯಾದ ದಿಕ್ಕಿನಲ್ಲಿ ಸಾಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಇದಕ್ಕೆ ಧ್ವನಿಗೂಡಿಸಿದ ಶೇಖರ್ ಲಾಯಿಲ ಘಟನೆ ನಡೆದ ಮೂರು ತಿಂಗಳ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರ ಪೋನ್ ಕರೆಗಳ ದಾಖಲೆ ಪರಿಶೀಲಿಸಿದರೆ ಸತ್ಯಸತ್ಯಾತೆ ಗೊತ್ತಾಗಬಹುದು ಎಂದರು.

ಬೆಳ್ತಂಗಡಿ ಇನ್ಸ್‌ಪೆಕ್ಟರ್ ಬಿ.ಜಿ ಸುಬ್ಬಾಪುರ್ ಮಠ್ ಇದು ಬೆಳ್ತಂಗಡಿ ಪೋಲಿಸ್ ಠಾಣೆಯಲ್ಲಿ ಅಸಹಜ ಪ್ರಕರಣ ದಾಖಲಾಗಿದ್ದು , ವೈದ್ಯಕೀಯ ತಾಂತ್ರಿಕ ಪರೀಕ್ಷೆಯ ವರದಿಯ ಆಧಾರದಲ್ಲಿ ತನಿಖೆ ನಡೆಯುತ್ತಿದ್ದು , ತಿಂಗಳಲ್ಲಿ ತನಿಖೆಯಲ್ಲಿ ಪ್ರಗತಿ ಸಾಧಿಸಲಿದ್ದೇವೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು.

ದಲಿತ ಮುಖಂಡ ಶೇಖರ್ ಎಲ್ ಮಾತನಾಡಿ, ಅಪ್ರಾಪ್ತ ವಯಸ್ಸಿನ ಮಕ್ಕಳು ದ್ವಿಚಕ್ರ ಸೇರಿದಂತೆ ವಾಹನಗಳನ್ನು ಅಡ್ಡಾದಿಡ್ಡಿಯಾಗಿ , ಅತಿವೇಗವಾಗಿ ಚಲಾಯಿಸುತ್ತಿದ್ದರೂ ಪೋಲಿಸ್ ಇಲಾಖೆ ಗಂಭೀರವಾಗಿ ಪರಿಗಣಿಸುತ್ತಿಲ್ಲ. ಇದು ಅಪಾಯಕಾರಿ ಬೆಳವಣಿಗೆ ಎಂದು ಆತಂಕ ವ್ಯಕ್ತಪಡಿಸಿದ ಅವರು ಒಂದೆರಡು ಪ್ರಕರಣಗಳಲ್ಲಿ ದಂಡ ವಸೂಲಿ ಮಾಡಿದರೆ ಕಡಿವಾಣ ಬೀಳಬಹುದು ಎಂದ ಅವರು ಲಾಯಿಲ ಗ್ರಾಮದ ದರ್ಪಿಂಜೆ ಸೇತುವೆಯನ್ನು ಗುರಿಯಾಗಿಸಿಕೊಂಡು ಅಕ್ರಮ ಚಟುವಟಿಕೆಗಳು ನಡೆಯುತ್ತಿದ್ದು , ಇದೀಗ ಇಲ್ಲಿ ಲಾಯಿಲ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಪ್ರಸಾದ್ ಶೆಟ್ಟಿ ಏಣಿಂಜೆರವರು ಮುತುವರ್ಜಿಯಿಂದ ಸಿಸಿ ಕ್ಯಾಮರಾಗಳನ್ನು ಅಳವಡಿಸಿದ್ದು , ಅದರ ಸಹಾಯದಿಂದ ಅಕ್ರಮ ಚಟುವಟಿಕೆಗಳಲ್ಲಿ ನಿರತರಾಗಿರುವವರ ವಿರುದ್ಧ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಇನ್ನೋರ್ವ ಮುಖಂಡ ಶೀನ ಪಿಲ್ಯ ಮಾತನಾಡಿ, ಪಿಲ್ಯ ಮಾರಿಗುಡಿ ಬಳಿ ವ್ಯಾಪಕ ಅಪಘಾತಗಳು ಸಂಭವಿಸುತ್ತಿದ್ದು , ಇಲ್ಲಿ ಬ್ಯಾರಿಗೇಡ್ ಅಳವಡಿಸಬೇಕು ಎಂದು ಒತ್ತಾಯಿಸಿದರು.

ನಾರಾವಿಯ ಕೃಷ್ಣಪ್ಪ ರವರು ಮಾತನಾಡಿ, ಇತ್ತೀಚಿಗೆ ನಾರಾವಿಯಲ್ಲಿ ದಲಿತ ವ್ಯಕ್ತಿಯೊಬ್ಬರ ಮನೆಗೆ ಅಕ್ರಮವಾಗಿ ಪ್ರವೇಶಿಸಿ ಮಕ್ಕಳ ಎದುರಿನಲ್ಲಿಯೇ ಹಲ್ಲೆ ನಡೆಸಿದ ಘಟನೆ ಬಗ್ಗೆ ಪ್ರಸ್ತಾಪಿಸಿ , ಪೋಲಿಸ್ ಇಲಾಖೆ ಯಾವುದೇ ಒತ್ತಡಕ್ಕೆ ಮಣಿಯದೆ ಕಾನೂನಿನಡಿ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು. ಮುಖಂಡರಾದ ಚೆನ್ನಕೇಶವ , ವೆಂಕಪ್ಪ ನಾಯ್ಕ ಉಪ್ಪಿನಂಗಡಿ , ರಾಮಣ್ಣ ಮೊದಲಾದವರು ಉಪಸ್ಥಿತರಿದ್ದರು.

ವೇದಿಕೆಯಲ್ಲಿ ಉಪ್ಪಿನಂಗಡಿ ಸರ್ಕಲ್ ಇನ್ಸ್‌ಪೆಕ್ಟರ್ ನಾಗರಾಜ್ ಉಪಸ್ಥಿತರಿದ್ದರು. ಸಭೆಯಲ್ಲಿ ಬೆಳ್ತಂಗಡಿ ಪೋಲಿಸ್ ಉಪ ವಿಭಾಗದ ಠಾಣೆಗಳ ಪೋಲಿಸ್ ಸಬ್ ಇನ್ಸ್‌ಪೆಕ್ಟರ್ ಗಳು ಉಪಸ್ಥಿತರಿದ್ದರು. ಡಿವೈಎಸ್ಪಿ ಕಛೇರಿಯ ಮನೋಹರ್ ಹಿಂದಿನ ಸಭೆಯ ನಡಾವಳಿಗಳನ್ನು ಸಭೆಯ ಮುಂದಿಟ್ಟರು.

- Advertisement -

Latest News

error: Content is protected !!