ಬೆಂಗಳೂರು; ಕಳೆದ ಹಲವು ದಿನಗಳಿಂದ ಗಂಭೀರವಾದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಸ್ಯಾಂಡಲ್ ವುಡ್ ನ ಹಿರಿಯ ಹಾಸ್ಯ ನಟ ಎಂ.ಎಸ್. ಉಮೇಶ್ ವಿಧಿವಶರಾಗಿದ್ದಾರೆ. ಅವರಿಗೆ 80 ವರ್ಷ ವಯಸ್ಸಾಗಿತ್ತು.
ಇತ್ತೀಚೆಗೆ ಉಮೇಶ್ ಅವರು ಮನೆಯಲ್ಲೇ ಕಾಲು ಜಾರಿ ಬಿದ್ದು ಆಸ್ಪತ್ರೆಗೆ ದಾಖಲಾಗಿದ್ದರು. ಪರೀಕ್ಷೆ ವೇಳೆ ಅವರಿಗೆ 4ನೇ ಹಂತದ ಲಿವರ್ ಕ್ಯಾನ್ಸರ್ ಇರುವುದು ಪತ್ತೆಯಾಗಿತ್ತು. ಹೆಚ್ಚಿನ ಪರೀಕ್ಷೆಗಳಿಗೆ ಒಳಪಡಿಸಿದ್ದ ವೈದ್ಯರು ರೋಗವನ್ನು ಖಚಿತಪಡಿಸಿಕೊಂಡು, ಕಿಮೊಥೆರಪಿ ಹಾಗೂ ಇಮ್ಯೂನೋಥೆರಪಿ ಮೂಲಕ ಚೇತರಿಸಿಕೊಳ್ಳುವ ಸಾಧ್ಯತೆ ಇದೆ ಎಂದು ತಿಳಿಸಿದ್ದರು. ಈಗ ಉಮೇಶ್ ನಿಧನರಾಗಿರುವುದು ಅಭಿಮಾನಿಗಳಿಗೆ ಮತ್ತು ಕುಟುಂಬದವರಿಗೆ ನೋವುಂಟು ಮಾಡಿದೆ.
ಉಮೇಶ್ ಅವರು 1960ರ ದಶಕದಿಂದಲೂ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಇತ್ತೀಚಿನ ದಿನಗಳ ತನಕವೂ ಅವರು ಸಿನಿಮಾಗಳಲ್ಲಿ ನಟಿಸುತ್ತಿದ್ದರು. ಉಮೇಶ್ ಅವರು ಅಭಿನಯಿಸಿದ್ದ ‘ಕಮಲ್ ಶ್ರೀದೇವಿ’, ‘ಐ ಆ್ಯಮ್ ಗಾಡ್’ ಸಿನಿಮಾಗಳು ಇತ್ತೀಚೆಗೆ ಬಿಡುಗಡೆ ಆಗಿದ್ದವು. ಪೋಷಕ ಪಾತ್ರಗಳು ಹಾಗೂ ಹಾಸ್ಯ ಪಾತ್ರಗಳ ಮೂಲಕ ಅವರು ಜನಪ್ರಿಯತೆ ಪಡೆದಿದ್ದರು.
1945ರ ಏಪ್ರಿಲ್ 24ರಂದು ಮೈಸೂರಿನಲ್ಲಿ ಜನಿಸಿದ ಅವರು 1960ರಲ್ಲಿ ಬಿಆರ್ ಪಂಥುಲು ನಿರ್ದೇಶನದ ‘ಮಕ್ಕಳ ರಾಜ್ಯ’ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪ್ರವೇಶಿಸಿದರು. ಬಳಿಕ ಹಲವಾರು ಸಿನಿಮಾಗಳಲ್ಲಿ ನಟಿಸುವ ಅವಕಾಶ ಪಡೆದುಕೊಂಡರು. ‘ನಾಗರ ಹೊಳೆ’, ‘ಗುರು ಶಿಷ್ಯರು’, ‘ಅನುಪಮಾ’, ‘ಕಾಮನ ಬಿಲ್ಲು’, ‘ಅಪೂರ್ವ ಸಂಗಮ’, ‘ಶ್ರುತಿ ಸೇರಿದಾಗ’, ‘ಹಾಲು ಸಕ್ಕರೆ’, ‘ಗೋಲ್ಮಾಲ್ ರಾಧಾಕೃಷ್ಣ’, ‘ಮಲಯ ಮಾರುತು’, ‘ಗಜಪತಿ ಗರ್ಭಭಂಗ’ ಮುಂತಾದವು ಸಿನಿಮಾಗಳ ಮೂಲಕ ಅವರು ಖ್ಯಾತಿ ಗಳಿಸಿದ್ದರು.


