ಬೆಂಗಳೂರು; ಥೈರಾಯ್ಡ್ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಸ್ಯಾಂಡಲ್ ವುಡ್ ನ ಖ್ಯಾತ ಖಳ ನಟ ಹರೀಶ್ ರಾಯ್ ಅವರು ನಿಧನರಾಗಿದ್ದಾರೆ.
ಉಪೇಂದ್ರ ನಿರ್ದೇಶನದ ಶಿವರಾಜ್ ಕುಮಾರ್ ಅಭಿನಯದ ಸೂಪರ್ ಹಿಟ್ ‘ಓಂ’ ಸಿನಿಮಾದ ಡಾನ್ ‘ರಾಯ್ ಹಾಗೂ ‘ಕೆಜಿಎಫ್ ನ ಚಾಚಾ’ ಎಂದೇ ಖ್ಯಾತರಾದ ಹರೀಶ್ ರಾಯ್ ಥೈರಾಯ್ಡ್ ಕ್ಯಾನ್ಸರ್ ನಿಂದಾಗಿ ಗುರುತೇ ಸಿಗಲಾರದಷ್ಟು ಬದಲಾಗಿದ್ದರು. ಕ್ಯಾನ್ಸರ್ ಹೊಟ್ಟೆಗೆ ಪಸರಿಸಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದರು. ಹೊಟ್ಟೆಯಲ್ಲಿ ನೀರು ತುಂಬಿ ಊದಿಕೊಂಡಿತ್ತು.
ಆರ್ಥಿಕವಾಗಿಯೂ ಸಂಕಷ್ಟಕ್ಕೆ ತುತ್ತಾಗಿದ್ದ ಹರೀಶ್ ರಾಯ್ ಅವರು ಆರ್ಥಿಕ ನೆರವು ಕೂಡ ಯಾಚಿಸಿದ್ದರು. ನಟ ಧ್ರುವ ಸರ್ಜಾ ಅವರು ಹರೀಶ್ ರಾಯ್ ಅವರಿಗೆ ಆರ್ಥಿಕ ನೆರವು ನೀಡಿದ್ದರು. ಹರೀಶ್ ರಾಯ್ ಓಂ, ಸಮರ, ಬೆಂಗಳೂರು ಅಂಡರ್ ವರ್ಲ್ಡ್, ಜೋಡಿಹಕ್ಕಿ,ರಾಜ್ ಬಹದ್ದೂರ್, ಸಂಜು ವೆಡ್ಸ್ ಗೀತಾ, ಸ್ವಯಂವರ, ನಲ್ಲ, ಕೆಜಿಎಫ್ ಚಾಪ್ಟರ್ 1 ಹಾಗೂ ಕೆಜಿಎಫ್ ಚಾಪ್ಟರ್ 2 ಸೇರಿದಂತೆ ತಮಿಳು, ತೆಲುಗು ಚಿತ್ರಗಳಲ್ಲೂ ಅಭಿನಯಿಸಿದ್ದಾರೆ.


