ಮೂಡಬಿದಿರೆ: ಅಶ್ವತ್ಥಪುರ ಸೀತಾರಾಮ ದೇವಸ್ಥಾನದ ಬಳಿ ಬೃಹತ್ ಸಂಖ್ಯೆಯಲ್ಲಿ ಸೇರಿದ ರೈತರು ಉಡುಪಿ – ಕಾಸರಗೋಡು 440 ಕೆ.ವಿ. ವಿದ್ಯುತ್ ಲೈನ್ ಕಾಮಗಾರಿಯ ಸಂದರ್ಭದಲ್ಲಿ ರೈತರ ಕೃಷಿ ನಾಶ ಮಾಡಿದ್ದಲ್ಲದೆ ಪೊಲೀಸ್ ಬಲವನ್ನು ಬಳಸಿಕೊಂಡು ರೈತರ ಮೇಲೆ ದೌರ್ಜನ್ಯವೆಸಗಿದ ಸ್ಟೆರ್ ಲೈಟ್ ವಿದ್ಯುತ್ ಕಂಪೆನಿ ವಿರುದ್ಧ ಪ್ರತಿಭಟನಾ ಜಾಥಾ, ಸಭೆ ನಡೆಸಿ ತಮ್ಮ ಆಕ್ರೋಶವನ್ನ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ರೈತರ ಹೋರಾಟವನ್ನ ಉದ್ದೇಶಿಸಿ ಮಾತನಾಡಿದ ಕೇಮಾರು ಸಾಂದೀಪನಿ ಸಾಧನಾಶ್ರಮದ ಶ್ರೀ ಈಶ ವಿಠಲದಾಸ ಸ್ವಾಮೀಜಿ, “ಎಲ್ಲೆಲ್ಲಿಂದಲೂ ಕಂಪೆನಿಗಳನ್ನು ಅವಿಭಜಿತ ಜಿಲ್ಲೆಗೆ ತಂದು ಕಸದಬುಟ್ಟಿಯಂತೆ ನೋಡಲಾಗುತ್ತಿದೆ. ಇಲ್ಲಿನ ರೈತರನ್ನು ಶೋಷಿಸಿ ಕೈಗಾರಿಕೆಯನ್ನು ಸ್ಥಾಪಿಸಿರುವುದರಿಂದ ನಾವು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಇನ್ನು ಆಡಳಿತ ವರ್ಗದವರು ಇಲ್ಲಿನ ಧಾರಣ ಸಾಮರ್ಥ್ಯವನ್ನು ಅರಿಯದೇ ಕೋಟಿ ವಿದ್ಯೆಯಲ್ಲಿ ಲೂಟಿ ವಿದ್ಯೆಯೇ ಮೇಲೂ ಎನ್ನುವಂತೆ ವರ್ತಿಸುತ್ತಿದ್ದಾರೆ. ನಾವು ರೈತರ ಮೇಲಿನ ದೌರ್ಜನ್ಯವನ್ನು ಯಾವುದೇ ಸಂದರ್ಭದಲ್ಲಿ ಸಹಿಸುವುದಿಲ್ಲ. ಮುಂದುವರೆಸಿದರೆ ಗುತ್ತಿಗೆ ಕಂಪೆನಿಗಳ ವಿರುದ್ಧ ಉಗ್ರ ಹೋರಾಟವನ್ನು ಮಾಡಬೇಕಾಗುತ್ತದೆ ಎಂದು ಸ್ವಾಮೀಜಿ ಎಚ್ಚರಿಸಿದರು.
ಕಟೀಲು ದುರ್ಗಾಪರಮೇಶ್ವರಿ ದೇವಳದ ಅನುವಂಶಿಕ ಅರ್ಚಕರಾದ ಅನಂತ ಅಸ್ರಣ್ಣ ಮಾತನಾಡಿ, ರೈತರು ನಮಗೆಲ್ಲ ಅನ್ನವನ್ನ ನೀಡುತ್ತಾರೆ. ಅವರ ಮೇಲಿನ ಇಂತಹ ದೌರ್ಜನ್ಯ ಸಹಿಸಲು ಅಸಾಧ್ಯ. ಆಡಳಿತ ವರ್ಗದವರು ಹಾಗೂ ಅಧಿಕಾರಿಗಳು ಇಂತಹ ಪ್ರಯತ್ನವನ್ನ ಮಾಡಬೇಡಿ ಎಂದರು.
ಈ ಸಂದರ್ಭದಲ್ಲಿ ರೈತ ಭಾಸ್ಕರ ಶೆಟ್ಟಿ, ರೈತ ಮುಖಂಡರಾದ ನಾರಾಯಣ ಸ್ವಾಮಿ, ಸುಚರಿತ ಶೆಟ್ಟಿ, ಕೃಷ್ಣ ಪ್ರಸಾದ್ ತಂತ್ರಿ ಸೇರಿದಂತೆ ಪ್ರಮುಖರು ಭಾಗವಹಿಸಿದ್ದರು.


