ಹಿಟ್ಲರ್ ಕಾಂಗ್ರೆಸ್ ಸರ್ಕಾರಕ್ಕೆ ಹೈಕೋರ್ಟ್ ಈಗಾಗಲೇ ಛಡಿಯೇಟು ನೀಡಿದ್ದು, ಇನ್ನು ಮುಂದೆ ಆರ್‌ಎಸ್‌ಎಸ್‌ಗೆ ಕಡಿವಾಣ ಹಾಕುವ ವ್ಯರ್ಥ ಪ್ರಯತ್ನವನ್ನ ಬಿಟ್ಟುಬಿಡಿ. ನಿಮಗೆ ತಾಕತ್ತಿದ್ದರೆ ಸಂಘವನ್ನು ನಿಷೇಧ ಮಾಡಿ ನೋಡೋಣ ಎಂದು ರಾಜ್ಯ ಸರ್ಕಾರಕ್ಕೆ ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಆಶೋಕ್ ಬಹಿರಂಗ ಸವಾಲು ಹಾಕಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣವಾದ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, ಯಾವುದೇ ಕಾರಣಕ್ಕೂ ಹಿಂಬಾಗಿಲಿನಿಂದ ಆರ್‌ಎಸ್‌ಎಸ್ ಚಟುವಟಿಕೆಗಳಿಗೆ ನಿರ್ಬಂಧ ಹಾಕಲು ಆಗುವುದಿಲ್ಲ. ಅಲ್ಲದೆ, ಈ ಹಿಟ್ಲರ್ ಆಟ ಜಾಸ್ತಿ ದಿನ ನಡೆಯುವುದಿಲ್ಲ ಸ್ವಾಮಿ ಎಂದು ಎಚ್ಚರಿಕೆ ಕೊಟ್ಟಿದ್ದಾರೆ. ಆರ್‌ಎಸ್‌ಎಸ್ ಪಥಸಂಚನಲಕ್ಕೆ ಅವಕಾಶ ನೀಡದಿರುವ ಕಾಂಗ್ರೆಸ್ ಸರ್ಕಾರದ ನಿರಂಕುಶವಾದಿ ನಡೆಗೆ ಮಾನ್ಯ ಹೈಕೋರ್ಟ್ ಛೀಮಾರಿ ಹಾಕಿದ್ದು, ಸಂವಿಧಾನದತ್ತ ಮೂಲಭೂತ ಹಕ್ಕುಗಳ ಉಲ್ಲಂಘನೆ ಆಗುತ್ತದೆ ಎಂದು ಸ್ಪಷ್ಟವಾಗಿ ಹೇಳಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಪ್ರಿಯಾಂಕ ಖರ್ಗೆ ಅವರೇ, ನಿಮ್ಮ ಪರಮೋಚ್ಛ ನಾಯಕ ರಾಹುಲ್ ಗಾಂಧಿ ಅವರು ಸದಾ ಜೇಬಿನಲ್ಲಿಟ್ಟುಕೊಂಡು ಓಡಾಡುವ ಸಂವಿಧಾನ ಪುಸ್ತಕದಲ್ಲಿ ನಾಗರೀಕರ ಮೂಲಭೂತ ಹಕ್ಕುಗಳಿಗೆ ಸ್ಥಾನ ಇಲ್ಲವೇ? ಎಂದು ಪ್ರಶ್ನೆ ಮಾಡಿದ್ದಾರೆ.


