ಹಾಸನ: ಇಂದಿನಿಂದ ಪ್ರಸಿದ್ಧ ಹಾಸನಾಂಬಾ ದೇವಿ ದರ್ಶನ ಆರಂಭವಾಗಲಿದೆ. ಇಂದು ದೇವಾಲಯ ತೆರೆದು ಮಧ್ಯಾಹ್ನ 12 ಗಂಟೆಗೆ ಪೂಜೆ ನೆರೆವೇರಲಿದೆ. ಮೊದಲ ದಿನ ಪೂಜಾ ಕೈಂಕರ್ಯಕ್ಕೆ ಮಾತ್ರ ಅವಕಾಶವಿದ್ದು, ಸಾರ್ವಜನಿಕರಿಗೆ ಪ್ರವೇಶಾವಕಾಶವಿರುವುದಿಲ್ಲ.
ಸಾರ್ವಜನಿಕರಿಗೆ ನಾಳೆ ಬೆಳಗ್ಗೆ 6 ಗಂಟೆಯಿಂದ ದರ್ಶನಾವಕಾಶ ಆರಂಭವಾಗಲಿದ್ದು, ಸಂಜೆ 7 ಗಂಟೆಗೆ ದರ್ಶನಕ್ಕೆ ಅವಕಾಶ ನಿಲ್ಲಿಸಿ ಪೂಜಾ ಕಾರ್ಯಗಳು ನಡೆಯಲಿವೆ.ಇನ್ನುಳಿದ ದಿನಗಳಲ್ಲಿ ದೇವಾಲಯವು 24 ಗಂಟೆಗಳು ತೆರೆದಿದ್ದರೂ ಸಹ ಪ್ರತಿ ದಿನ ನೈವೇದ್ಯ ಮತ್ತು ಅಲಂಕಾರ ಕಾರ್ಯಗಳಿಗೆ ಮಧ್ಯಾಹ್ನ 2 ಗಂಟೆಯಿಂದ ಮಧ್ಯಾಹ್ನ 3.30 ರ ನಡುವೆ ಮತ್ತು ಬೆಳಗಿನ ಜಾವ 2 ರಿಂದ 5 ಗಂಟೆಯವರೆಗೆ ಸಾರ್ವಜನಿಕರಿಗೆ ದರ್ಶನಾವಕಾಶವಿರುವುದಿಲ್ಲ. ಈ ಸಮಯಗಳನ್ನು ಹೊರತುಪಡಿಸಿ ಅಕ್ಟೋಬರ್ 11 ರಿಂದ ಬೆಳಗಿನ ಜಾವ 6 ಗಂಟೆಯಿಂದ ಅಕ್ಟೋಬರ್ 22ರ ಬುಧವಾರ ಸಂಜೆ 7 ಗಂಟೆಯವರೆಗೆ ಭಕ್ತರಿಗೆ ದರ್ಶನಾವಕಾಶವಿರುತ್ತದೆ. ಕೊನೆಯ ದಿನವಾದ ಅಕ್ಟೋಬರ್ 22 ರಂದು ಸಂಜೆ 7 ಗಂಟೆಗೆ ಸಾರ್ವಜನಿಕರಿಗೆ ಪ್ರವೇಶ ನಿಲ್ಲಿಸಲಾಗುತ್ತದೆ.
ಧರ್ಮ ದರ್ಶನ, 300 ರೂಪಾಯಿ ಮತ್ತು 1000 ರೂಪಾಯಿ ಹೀಗೆ ಮೂರು ಪ್ರತ್ಯೇಕ ಸಾಲುಗಳಲ್ಲಿ ದರ್ಶನಾವಕಾಶ ಕಲ್ಪಿಸಲಾಗಿದೆ. ಅಕ್ಟೋಬರ್ 23ರಂದು ಪೂಜಾ ಕೈಂಕರ್ಯಗಳೊಂದಿಗೆ ಜಾತ್ರಾ ಮಹೋತ್ಸವ ಸಮಾರೋಪಗೊಳ್ಳಲಿದೆ.ಸಚಿವರು, ಶಾಸಕರು, ನ್ಯಾಯಮೂರ್ತಿಗಳು, ಉನ್ನತ ಅಧಿಕಾರಿಗಳು ಮತ್ತು ಇತರೆ ಗಣ್ಯರು ತಮ್ಮ ಆಗಮನದ ದಿನಾಂಕವನ್ನು ಜಿಲ್ಲಾಧಿಕಾರಿಗಳ ಕಛೇರಿಗೆ ಮೊದಲೇ ತಿಳಿಸಿ ನಿಗದಿತ ದಿನಾಂಕದಂದು ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 12.30 ಗಂಟೆಯ ನಡುವೆ ಮಾತ್ರ ದರ್ಶನ ಪಡೆಯಬೇಕಾಗಿದ್ದು, ಬೇರೆ ಅವಧಿಯಲ್ಲಿ ಗಣ್ಯರಿಗೆ ದರ್ಶನಾವಕಾಶ ಇರುವುದಿಲ್ಲ.ಅಲ್ಲದೇ ಗಣ್ಯರು ಮೊದಲು ನೇರವಾಗಿ ಹಾಸನದ ಸರ್ಕಾರಿ ಅತಿಥಿ ಗೃಹಕ್ಕೆ ಆಗಮಿಸಬೇಕಾಗಿದ್ದು, ಬಳಿಕ ಅವರಿಗೆ ಜಿಲ್ಲಾಡಳಿತದ ವಾಹನದಲ್ಲಿ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತದೆ.


