‘ಕಾಂತಾರ ಚಾಪ್ಟರ್ 1’ ಚಿತ್ರದ ಟ್ರೇಲರ್ ಸೋಮವಾರದಂದು ಬಿಡುಗಡೆಯಾಗಿದ್ದು, ಇದೀಗ ಕರಾವಳಿ ಭಾಗದ ಕಥನವುಳ್ಳ ಸಿನಿಮಾ ಭಾರತೀಯ ಚಿತ್ರರಂಗದಲ್ಲೇ ಹೊಸದೊಂದು ದಾಖಲೆಗೈದಿದೆ.
ರಿಷಭ್ ಶೆಟ್ಟಿ ಅಭಿನಯದ ಮತ್ತು ನಿರ್ದೇಶನದ ಬಹು ನಿರೀಕ್ಷಿತ ‘ಕಾಂತಾರ ಚಾಪ್ಟರ್ 1’ ಸಿನಿಮಾದ ಟ್ರೇಲರ್ ಬಿಡುಗಡೆಯಾದ 24 ಗಂಟೆಗಳಲ್ಲಿ 107 ಮಿಲಿಯನ್ ವೀಕ್ಷಣೆ ಕಂಡು ಹೊಸ ದಾಖಲೆಯನ್ನು ಬರೆದಿದೆ.
ಚಿತ್ರದ ಐದು ಭಾಷೆಗಳ ಟ್ರೇಲರ್ ಬಿಡುಗಡೆಯಾಗಿದ್ದು, ಕನ್ನಡದ ಟ್ರೇಲರನ್ನು ಕನ್ನಡದ ಜನತೆ ಬಿಡುಗಡೆ ಮಾಡಿದೆ. ಮಿಕ್ಕಂತೆ ಹೃತಿಕ್ ರೋಶನ್, ಪ್ರಭಾಸ್, ಪೃಥ್ವಿರಾಜ್ ಮತ್ತು ಶಿವಕಾರ್ತಿಕೇಯನ್ ಕ್ರಮವಾಗಿ ಹಿಂದಿ, ತೆಲುಗು, ಮಲಯಾಳಂ ಮತ್ತು ತಮಿಳು ಭಾಷೆಯ ಟ್ರೇಲರ್ ಬಿಡುಗಡೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
‘ಕಾಂತಾರ ಚಾಪ್ಟರ್ 1’ ಚಿತ್ರವನ್ನು ಹೊಂಬಾಳೆ ಫಿಲಂಸ್ ನಿರ್ಮಿಸಿದ್ದು, ರಿಷಭ್ ಶೆಟ್ಟಿ ನಿರ್ದೇಶಿಸುವುದರ ಜೊತೆಗೆ ನಾಯಕನಾಗಿಯೂ ಕಾಣಿಸಿಕೊಂಡಿದ್ದಾರೆ. ಅವರ ಜೊತೆಗೆ ರುಕ್ಮಿಣಿ ವಸಂತ್, ಅಚ್ಯುತ್ ಕುಮಾರ್, ಗುಲ್ಶನ್ ದೇವಯ್ಯ ಮುಂತಾದವರು ನಟಿಸಿದ್ದು, ಚಿತ್ರವು ಕನ್ನಡ ಸೇರಿದಂತೆ ತೆಲುಗು, ಹಿಂದಿ, ತಮಿಳು, ಮಲಯಾಳಂ, ಬಂಗಾಳಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ.


