Saturday, June 6, 2026
Homeತಾಜಾ ಸುದ್ದಿವಿಷ್ಣುವರ್ಧನ್‍ ಅಭಿಮಾನ ಕ್ಷೇತ್ರದ ನೀಲಿನಕ್ಷೆ ಅನಾವರಣ

ವಿಷ್ಣುವರ್ಧನ್‍ ಅಭಿಮಾನ ಕ್ಷೇತ್ರದ ನೀಲಿನಕ್ಷೆ ಅನಾವರಣ

- Advertisement -
- Advertisement -

ಡಾ. ವಿಷ್ಣುವರ್ಧನ್‌ ಅವರ 75ನೇ ಹುಟ್ಟುಹಬ್ಬದ ಅಂಗವಾಗಿ ಬೆಂಗಳೂರಿನಲ್ಲಿ ಅರ್ಧ ಎಕರೆ ಜಾಗದಲ್ಲಿ ಸಿದ್ಧವಾಗಲಿರುವ ಡಾ. ವಿಷ್ಣುವರ್ಧನ ಅಭಿಮಾನ ಕ್ಷೇತ್ರದ ನೀಲಿ ನಕ್ಷೆ ಬಿಡುಗಡೆಯಾಗಿದೆ.

ವಿಷ್ಣುವರ್ಧನ್‍ ಅವರ ಹುಟ್ಟುಹಬ್ಬದ ಪ್ರಯುಕ್ತ ಅವರ ಸ್ಮಾರಕದ ನೀಲಿನಕ್ಷೆಯನ್ನು ಬಿಡುಗಡೆ ಮಾಡುವುದಾಗಿ ಡಾ. ವಿಷ್ಣು ಸೇನಾ ಸಮಿತಿಯ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್‍ ಹೇಳಿದ್ದರು. ಅದರಂತೆ, ಗುರುವಾರ ಸಂಜೆ ಕಲಾವಿದರ ಸಂಘದಲ್ಲಿ ನಡೆದ ಸಮಾರಂಭದಲ್ಲಿ ಅವರು ನೀಲಿನಕ್ಷೆ ಬಿಡುಗಡೆ ಮಾಡಿದ್ದಾರೆ.

ನಟ ಸುದೀಪ್‌, ಉದ್ಯಮಿ ಅಶೋಕ್‌ ಖೇಣಿ ಹಾಗೂ ಡಾ. ವಿಷ್ಣು ಸೇನಾ ಸಮಿತಿಯ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್‌ ಅವರು ಜೊತೆಗೂಡಿ ಈ ಅಭಿಮಾನಿ ಕ್ಷೇತ್ರಕ್ಕೆ ಅಗತ್ಯವಿರುವ ಜಾಗವನ್ನು ಖರೀದಿ ಮಾಡಿದ್ದಾರೆ. ಈ ಜಾಗದಲ್ಲಿ ಡಾ. ವಿಷ್ಣು ಅವರ 25 ಅಡಿಯ ಪ್ರತಿಮೆ, ಧ್ಯಾನ ಮಂದಿರ, ಪುಸ್ತಕ ಭಂಡಾರ, ಫೋಟೋ ಗ್ಯಾಲರಿಯನ್ನು ನಿರ್ಮಾಣ ಮಾಡಲಾಗುತ್ತದೆ. ಈ ಸ್ಮಾರಕವನ್ನು ಜ್ಞಾನ, ಧ್ಯಾನ ಮತ್ತು ದರ್ಶನ ಎಂಬ ಪರಿಕಲ್ಪನೆಯಡಿ ನಿರ್ಮಾಣ ಮಾಡಲಾಗುತ್ತಿದೆ.

ವಿಶೇಷವೆಂದರೆ, ಇಲ್ಲಿ ಧ್ಯಾನ ಮಂದಿರದಲ್ಲಿ ವಿಷ್ಣುವರ್ಧನ್‍ ಅವರು ಧ್ಯಾನಸ್ಥ ಭಂಗಿಯಲ್ಲಿರುವ ಪ್ರತಿಮೆ ಇರಲಿದ್ದು, ಮಧ್ಯಾಹ್ನ ಎರಡು ಗಂಟೆ ಸಮಯಕ್ಕೆ ಸೂರ್ಯನ ಕಿರಣಗಳು ವಿಷ್ಣು ಅವರ ಅಮೃತ ಶಿಲೆಯ ಪ್ರತಿಮೆಯ ಮೇಲೆ ಬೀಳುವಂತೆ ಧ್ಯಾನ ಮಂದಿರವನ್ನು ವಿನ್ಯಾಸ ಮಾಡಲಾಗುತ್ತದೆ. ಹಾಗೆಯೇ, ಪ್ರತಿ ಸಂಜೆ 6.30ಕ್ಕೆ ಲೇಸರ್‌ ಶೋ ನಡೆಯುವಂತೆ ವ್ಯವಸ್ಥೆಯನ್ನು ಮಾಡಲಾಗುತ್ತಿದೆ.

ಇದು ಅಭಿಮಾನಿಗಳೇ ನಿರ್ಮಿಸುತ್ತಿರುವ ದೇಶದ ಮೊಟ್ಟ ಮೊದಲ ಸ್ಮಾರಕ ಎನ್ನುವ ಅವರು, ‘ಒಳಗೆ ಹೋದರೆ ಎರಡು ತಾಸು ಅಲ್ಲಿರುವಂತೆ ಹಿಡಿದಿಟ್ಟುಕೊಳ್ಳುವಂತೆ ಸ್ಮಾರಕ ನಿರ್ಮಾಣ ಮಾಡಲಾಗುತ್ತಿದೆ. ಪ್ರತಿ ನವೆಂಬರ್‍ ಒಂದರಂದು ರಾಜ್ಯೋತ್ಸವದ ಪ್ರಯುಕ್ತ ಧ್ವಜಾ ರೋಹಣ ನಡೆಯಲಿದೆ. ಮುಂದಿನ ಒಂದು ವರ್ಷದಲ್ಲಿ ವಿಷ್ಣುವರ್ಧನ್‍ ಅಭಿಮಾನ ಕ್ಷೇತ್ರದ ಅನಾವರಣವಾಗಲಿದೆ’ ಎಂದರು.

- Advertisement -

Latest News

error: Content is protected !!