ಮಂಗಳೂರು ; ಅಡ್ಯಾರ್ ತಜಿಪೋಡಿ ಎಂಬಲ್ಲಿ ಗೋ ಕಳ್ಳತನ ಮಾಡಿದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಶಾಬಾಜ್ ಅಹಮ್ಮದ್ , ಮೊಹಮ್ಮದ್ ಸುಹಾನ್ , ವಳಚ್ಚಿಲ್ ಖಾದರ್ ಮೊಹಮ್ಮದ್ @ ಕೋಳಿ ಮೋನಕ್ಕ ಬಂಧಿತ ಆರೋಪಿಗಳು.
ದಿನಾಂಕ: 13-09-2025 ರಂದು ಬೆಳಗಿನ ಜಾವ ಮಂಗಳೂರು ನಗರದ ತಜಿಪೋಡಿ ಮನೆ, ಅಡ್ಯಾರ್ ಎಂಬಲ್ಲಿ ಉಮೇಶ್ ಆಳ್ವ ಎಂಬವರ ಮನೆಯ ಅಂಗಳದಿಂದ ಒಂದು ಕ್ರಾಸ್ ಜರ್ಸಿ ಹಸುವನ್ನು ಕಳ್ಳತನ ಮಾಡಿದ ಬಗ್ಗೆ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಠಾಣಾ ಅ.ಕ್ರ: 144/2025 ಕಲಂ: 303 (2) ಐಪಿಸಿ ರಂತೆ ಪ್ರಕರಣ ದಾಖಲಾಗಿತ್ತು. ಕಳುವಾದ ಹಸುವನ್ನು ಕಂಕನಾಡಿ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ, ಜೀವಂತವಾಗಿ ಪತ್ತೆ ಮಾಡಿ ಆರೋಪಿಗಳನ್ನು ಬಂಧಿಸಿದ್ದಾರೆ.
ಆರೋಪಿ ಶಾಬಾಜ್ ಅಹ್ಮದ್ ಕಣ್ಣೂರು ಎಂಬಾತನ ವಿರುದ್ದ ಈಗಾಗಲೇ ಮಂಗಳೂರು ಗ್ರಾಮಾಂತರ ಮತ್ತು ಕಂಕನಾಡಿ ಠಾಣೆಯಲ್ಲಿ ಒಂದು ಕೊಲೆ, ಎರಡು ಕೊಲೆ ಪ್ರಯತ್ನ ಮತ್ತು ಒಂದು ದೊಂಬಿ ಪ್ರಕರಣಗಳು ಮತ್ತು ಮೊಹಮ್ಮದ್ ಸುಹಾನ್, ಅರ್ಕುಳ ಎಂಬಾತನ ವಿರುದ್ದ ಉಳ್ಳಾಲ ಠಾಣೆಯಲ್ಲಿ ಒಂದು ಎನ್.ಡಿ.ಪಿ.ಎಸ್ ಕಾಯ್ದೆ ಪ್ರಕರಣ ಹಾಗೂ ವಳಚ್ಚಿಲ್ ಖಾದರ್ ಮೊಹಮ್ಮದ್ @ ಕೋಳಿ ಮಹಮದ್, ಅಡ್ಯಾರ್ ಎಂಬಾತನ ವಿರುದ್ದ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ 2024 ರಲ್ಲಿ ಒಂದು ಗೋ ಹತ್ಯೆ ಪ್ರಕರಣ ದಾಖಲಾಗಿರುತ್ತದೆ.
ಆರೋಪಿಗಳು ದನ ಕಳ್ಳತನ ಮಾಡಿ ಅದನ್ನು ವಳಚಿಲ್ ಅಬ್ದುಲ್ ಖಾದರ್ ಮನೆಗೆ ಹೊಂದಿಕೊಂಡ ಶೆಡ್ ನಲ್ಲಿ ಹತ್ಯೆ ಮಾಡಿ ಮಾಂಸ ಮಾಡಲು ಸಿದ್ಧತೆ ಮಾಡಿಕೊಂಡ ಹಿನ್ನಲೆಯಲ್ಲಿ ಜಾಗವನ್ನು ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಆದ್ಯಾದೇಶ -2020 ರಲ್ಲಿ ಪ್ರದತ್ತವಾದ ಅಧಿಕಾರದಂತೆ ಜಪ್ತಿ ಮಾಡಿ, ಸರಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳುವ ಕಾನೂನು ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿರುತ್ತದೆ.


