ಪುತ್ತೂರು: ಹುಲಿ ಕುಣಿತದಲ್ಲಿ ತನ್ನದೇ ಹೆಜ್ಜೆ ಗುರುತು ಮೂಡಿಸಿ ಹುಲಿ ಕುಣಿತಕ್ಕೊಂದು ಬ್ರಾಂಡ್ ತಂದುಕೊಟ್ಟ ಕೆಮ್ಮಾಯಿ ನಿವಾಸಿ ಪಿಲಿ ರಾಧಣ್ಣ ಯಾನೆ ರಾಧಾಕೃಷ್ಣ ಶೆಟ್ಟಿ (59) ಸೆ.6 ರಂದು ಮುಂಜಾನೆ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ಅನಾರೋಗ್ಯದ ಕಾರಣದಿಂದ ಅವರನ್ನು ಸೆ.5 ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು.ಆದ್ರೆ ಸೆಪ್ಟಂಬರ್ 6 ರಂದು ಮುಂಜಾನೆ ಅವರು ನಿಧನರಾಗಿದ್ದಾರೆ.
65 ವರ್ಷಗಳ ಹಿಂದೆ ಪುತ್ತೂರಿನಲ್ಲಿ ಇದ್ದದ್ದು ಎರಡು ಪಿಲಿ. ಒಂದು ಪಿಲಿ ಸಂಕಪ್ಪಣ್ಣ, ಇನ್ನೊಂದು ಪಿಲಿ ಗಂಗಣ್ಣ. ಪಿಲಿ ಸಂಕಪ್ಪ ಶೆಟ್ಟಿ ಅವರ ಪುತ್ರನೇ ಪಿಲಿ ರಾಧಣ್ಣ. ಸಂಕಪ್ಪ ಅವರು ಸುಮಾರು 30 ವರ್ಷಗಳ ಕಾಲ ಕುಣಿದವರು. ರಾಧಾಕೃಷ್ಣ ಶೆಟ್ಟಿ ಅವರಿಗೆ 9 ವರ್ಷ (4ನೇ ತರಗತಿ) ಇರುವಾಗ ತಂದೆ ಸಂಕಪ್ಪ ಅವರು ಕಿನ್ನಿಪಿಲಿ (ಮರಿ ಹುಲಿ) ವೇಷಧಾರಿಯಾಗಿ ಸೇರಿಸಿಕೊಂಡರು. ಅಲ್ಲಿಂದ ಪಿಲಿ ವೇಷ ಶುರು. ಪುತ್ತೂರಿನ ಮೊದಲ ಕಿನ್ನಿ ಪಿಲಿ ಎಂಬ ಖ್ಯಾತಿ ಇವರದ್ದು.
ಅಪ್ಪ-ಮಗ ಇಬ್ಬರು 10 ವರ್ಷಗಳ ಕಾಲ ಜತೆ ಜತೆಯಾಗಿ ಹೆಜ್ಜೆ ಹಾಕಿದರು. ಕಿನ್ನಿ ಪಿಲಿಯಾಗಿ ಟೋಪಿ ಹಾಕಿಕೊಂಡು ಹೊರಟ ಪುಟ್ಟ ಬಾಲಕ ಮುಂದೆ ಪಿಲಿ ರಾಧಣ್ಣ ಆಗಿ ಗುರುತಿಸಿಕೊಂಡರು. ಅವರ ಹುಲಿ ಸೇವೆಗೆ ಕಳೆದ ವರ್ಷಕ್ಕೆ 48 ವರ್ಷ. ರಾಧಾಕೃಷ್ಣ ಶೆಟ್ಟಿ ಅವರು ಪತ್ನಿ, ಇಬ್ಬರು ಪುತ್ರರು, ಪುತ್ರಿಯನ್ನು ಅಗಲಿದ್ದಾರೆ.


