ಮಂಗಳೂರು : ಸಹಕಾರಿ ಬ್ಯಾಂಕಿಂಗ್ ರಂಗದಲ್ಲಿ 111 ವರ್ಷಗಳ ಸಾರ್ಥಕ ಸೇವೆಯನ್ನು ಪೂರೈಸಿ ಜನಸಾಮಾನ್ಯರ ಆರ್ಥಿಕ ಶಕ್ತಿಯಾಗಿ ಬೆಳೆದಿರುವ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್(ಎಸ್ ಸಿಡಿಸಿಸಿ ಬ್ಯಾಂಕ್)ಗೆ ರಾಜ್ಯದ ಪ್ರತಿಷ್ಠಿತ ಅಪೆಕ್ಸ್ ಬ್ಯಾಂಕ್ ಪ್ರಶಸ್ತಿಯನ್ನು ಬುಧವಾರ ಬೆಂಗಳೂರುನಲ್ಲಿ ಪ್ರದಾನ ಮಾಡಲಾಯಿತು.
ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್‌ನ ವಾರ್ಷಿಕ ಮಹಾಸಭೆಯಲ್ಲಿ ರಾಜ್ಯದಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿಗೆ ನೀಡುತ್ತಿರುವ ರಾಜ್ಯಮಟ್ಟದ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಅಪೆಕ್ಸ್ ಬ್ಯಾಂಕಿನ ಅಧ್ಯಕ್ಷರಾದ ಬೆಳ್ಳಿಪ್ರಕಾಶ್ ಅವರಿಂದ ಎಸ್‌ಸಿಡಿಸಿಸಿ ಬ್ಯಾಂಕಿನ ಅಧ್ಯಕ್ಷರಾದ ಸಹಕಾರ ರತ್ನ ಡಾ.ಎಂ.ಎನ್ ರಾಜೇಂದ್ರಕುಮಾರ್ ಹಾಗೂ ಮುಖ್ಯಕಾರ್ಯನಿರ್ವಹಣಾಧಿಕಾರಿ ಗೋಪಾಲಕೃಷ್ಣ ಭಟ್ ಕೆ. ಅವರು ಸ್ವೀಕರಿಸಿದರು.
23 ಬಾರಿ ಪ್ರಶಸ್ತಿ: ನಿರಂತರ ಸಮಾಜಮುಖಿ ಸೇವೆಗಳೊಂದಿಗೆ ತನ್ನ ಗ್ರಾಹಕರಿಗೆ ಸಂತೃಪ್ತ ಸೇವೆಯನ್ನು ನೀಡುತ್ತಿರುವ ಎಸ್‌ಸಿಡಿಸಿಸಿ ಬ್ಯಾಂಕ್ 2023-24ನೇ ಸಾಲಿನಲ್ಲಿ ಸರ್ವಾಂಗೀಣ ಪ್ರಗತಿಯೊಂದಿಗೆ ಗುರುತಿಸಿಕೊಂಡು, ಲೆಕ್ಕ ಪಲಿಶೋಧನೆಯಲ್ಲಿ ‘ಎ’ ವರ್ಗವನ್ನು ಪಡೆದು ಅಪೆಕ್ಸ್ ಬ್ಯಾಂಕ್ ನೀಡುವ ಪ್ರಥಮ ಪ್ರಶಸ್ತಿಗೆ ಆಯ್ಕೆಗೊಂಡಿರುತ್ತದೆ. ಮಾತ್ರವಲ್ಲ 23 ಬಾರಿ ಅಪೆಕ್ಸ್ ಬ್ಯಾಂಕ್ ಪ್ರಶಸ್ತಿಯನ್ನು ಪಡೆದ ಹೆಗ್ಗಳಿಕೆಗೂ ಎಸ್ ಸಿಡಿಸಿಸಿ ಬ್ಯಾಂಕ್ ಪಾತ್ರವಾಗಿದೆ.
ಪ್ರಗತಿಪರ ಯೋಜನೆಗಳು : ಎಸ್ ಸಿಡಿಸಿಸಿ ಬ್ಯಾಂಕ್ ಪ್ರಗತಿಪರ ಯೋಜನೆಗಳನ್ನು ಅನುಷ್ಠಾನಗೊಳಿಸಿ ಮಾದರಿ ಬ್ಯಾಂಕ್ ಎನಿಸಿಕೊಂಡಿದೆ. ತನ್ನ 113 ಶಾಖೆಗಳು ಸಂಪೂರ್ಣ ಗಣಕೀಕರಣಗೊಂಡ ಕೋರ್ ಬ್ಯಾಂಕಿಂಗ್‌ನಂತಹ ಹೊಸತನದ ಬ್ಯಾಂಕಿಂಗ್ ಸೇವೆಯನ್ನು ಗ್ರಾಹಕರಿಗೆ ನಗರ ಹಾಗೂ ಗ್ರಾಮೀಣ ಪ್ರದೇಶಗಳ ಶಾಖೆಗಳ ಮೂಲಕ ನೀಡುತ್ತಿದೆ. ಮಾತ್ರವಲ್ಲ ಮಂಗಳೂರು ಮತ್ತು ಉಡುಪಿಯಲ್ಲಿ ಬ್ಯಾಂಕ್ ಆನ್ ವೀಲ್ ಎನ್ನುವ ಪರಿಕಲ್ಪನೆಯಲ್ಲಿ ಮೊಬೈಲ್ ಬ್ಯಾಂಕಿಂಗ್ ನಂತಹ ವಿನೂತನ ಬ್ಯಾಂಕಿಂಗ್ ಸೇವೆಯನ್ನು ನೀಡುತ್ತಿದೆ. ಇಂತಹ ಬ್ಯಾಂಕಿಂಗ್ ವ್ಯವಸ್ಥೆಯನ್ನು ರಾಜ್ಯ ಮಟ್ಟದಲ್ಲೇ ಪರಿಚಯಿಸಿದ ಮೊದಲ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಎಂಬ ಮನ್ನಣಿಗೂ ಎಸ್‌ಸಿಡಿಸಿಸಿ ಬ್ಯಾಂಕ್ ಪಾತ್ರವಾಗಿರುತ್ತದೆ. ಕೃಷಿ ಸಾಲ ಮರುಪಾವತಿಯಲ್ಲಿ ಶೇಕಡಾ ನೂರರ ಸಾಧನೆಯನ್ನು ಕಳೆದ 30 ವರ್ಷಗಳಿಂದ ಮಾಡುತ್ತಿರುವುದು ರಾಷ್ಟ್ರೀಯ ದಾಖಲೆ ಆಗಿದೆ.
ಸಹಕಾರ ರತ್ನ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಅವರ ದಕ್ಷ ಸಾರಥ್ಯದಲ್ಲಿ ಕಳೆದ 31 ವರ್ಷಗಳಿಂದ ಯಶಸ್ಸಿನ ಪಥದಲ್ಲಿ ಎಸ್‌ಸಿಡಿಸಿಸಿ ಬ್ಯಾಂಕ್ ಮುನ್ನಡೆಯನ್ನು ಕಾಣುತ್ತಿದೆ. ವರದಿ ವರ್ಷದಲ್ಲಿ ಬ್ಯಾಂಕಿಗೆ ಕೇಂದ್ರ ಸರಕಾರದ ಅಟಲ್ ಪಿಂಚಣಿ ಯೋಜನೆಯ ಸಮರ್ಪಕ ಅನುಷ್ಠಾನಕ್ಕಾಗಿ ಎಪಿವೈ ರಾಷ್ಟ್ರೀಯ ಪ್ರಶಸ್ತಿ ಬ್ಯಾಂಕಿಗೆ ಲಭಿಸಿದೆ.
ಸರ್ವಾಂಗೀಣ ಸಾಧನೆ : ಸೇವೆಯಲ್ಲಿ ಸುದೀರ್ಘ ಕಾಲ ಗುರುತಿಸಿಕೊಂಡಿರುವ ಎಸ್‌ಸಿಡಿಸಿಸಿ ಬ್ಯಾಂಕ್ ವರದಿ ವರ್ಷದಲ್ಲಿ ಎಲ್ಲಾ ವ್ಯವಹಾರಗಳಲ್ಲೂ ಗುರಿ ಮೀರಿದ ಸಾಧನೆಯನ್ನು ಮಾಡಿದೆ. ವರದಿ ವರ್ಷದಲ್ಲಿ ರೂ.17366.68 ಕೋಟಿಗಳ ಒಟ್ಟು ವ್ಯವಹಾರ ದಾಖಲಿಸುವ ಮೂಲಕ ಹೊಸ ಇತಿಹಾಸ ನಿರ್ಮಿಸಿದೆ. ವಾಣಿಜ್ಯ ಬ್ಯಾಂಕುಗಳಲ್ಲಿ ಠೇವಣಾತಿ ಸಂಗ್ರಹಣೆಯಲ್ಲಿ ಪೈಪೋಟಿ ಇದ್ದರೂ ಒಟ್ಟು ರೂ.7882.76 ಕೋಟಿ ಠೇವಣಿ ಸಂಗ್ರಹಿಸಿ, ಅತೀ ಹೆಚ್ಚು ಠೇವಣಿ ಸಂಗ್ರಹಿಸಿದ ರಾಜ್ಯದ ಪ್ರಥಮ ಜಿಲ್ಲಾ ಬ್ಯಾಂಕ್ ಎನ್ನುವ ಕೀರ್ತಿಗೂ ಪಾತ್ರವಾಗಿದೆ.ಬ್ಯಾಂಕ್ ಆರ್ಥಿಕ ವರ್ಷದಲ್ಲಿ ಸೇವಾ ಬದ್ಧತೆಯನ್ನು ಮೆರೆದು ರೂ.9483.92 ಕೋಟಿ ಮುಂಗಡ ನೀಡಿದೆ. ಸ್ವಸಹಾಯ ಗುಂಪುಗಳ ಸಂಘಟನೆಗೆ ಭದ್ರ ನೆಲೆಯನ್ನು ಒದಗಿಸಿದ ಬ್ಯಾಂಕ್ ಒಟ್ಟು 34,621 ಸ್ವಸಹಾಯ ಗುಂಪುಗಳನ್ನು ವಿವಿಧ ಸಹಕಾರ ಸಂಘಗಳ ಜೋಡಣೆಯ ಮೂಲಕ ರಚಿಸಿಕೊಂಡಿದೆ. ಈ ಗುಂಪುಗಳ ಒಟ್ಟು ಉಳಿತಾಯ ರೂ.174.31 ಕೋಟಿ. ಒಟ್ಟು 34,613 ಸ್ವಸಹಾಯ ಗುಂಪುಗಳಿಗೆ ರೂ.497.36 ಕೋಟಿ ಸಾಲ ಸಂಯೋಜಿಸಲಾಗಿದೆ.
ಬೆಂಗಳೂರಿನಲ್ಲಿ ಬುಧವಾರ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಚಿವರು ಹಾಗೂ ನಿರ್ದೇಶಕರಾದ ಶಿವಾನಂದ ಎಸ್. ಪಾಟೀಲ್, ನಿರ್ದೇಶಕರುಗಳಾದ ಲಕ್ಷ್ಮಣ ಸಂಗಪ್ಪ ಸವದಿ, ಸಿದ್ಧಪ್ಪ ಕಲ್ಲಪ್ಪ ಸವದಿ, ಶರಣೇಗೌಡ ಬಯ್ಯಾಪುರ್, ಶಿವರಾಮ್ ಮಹಾಬಲೇಶ್ವರ ಹೆಬ್ಬಾರ್, ಡಾ.ಆರ್.ಎಂ. ಮಂಜುನಾಥ ಗೌಡ , ಎಸ್.ರವಿ, ಟಿ.ಎಂ.ಚಂದ್ರಶೇಖರಯ್ಯ , ಶಿವಾನಂದ ಅಪ್ಪಾಸಾಹೇಬ ಮಾನಕರ್, ಕೊಡಂದೇರ ಪಿ.ಗಣಪತಿ , ಉಮಾಕಾಂತ ನಾಗಮಾರಪಳ್ಳಿ , ಜಿ.ಎನ್.ಸ್ವಾಮಿ, ಅಮರಾವತಿ ಸಿ.ಅಶ್ವತ್ , ಲಿಂಗರಾಜ್ ಎಸ್. ಚಪ್ಪರದಳ್ಳಿ , ಮುಖ್ಯಕಾರ್ಯನಿರ್ವಹಣಾಧಿಕಾರಿ ಸಿ.ಎನ್.ದೇವರಾಜ್ ಮೊದಲಾದವರು ಉಪಸ್ಥಿತರಿದ್ದರು.


