ಮಂಗಳೂರು; ನಿಯಂತ್ರಣ ತಪ್ಪಿ ಕಾಂಪೌಂಡ್ ಗೋಡೆಗೆ ಸ್ಕೂಟರ್ ಡಿಕ್ಕಿಯಾದ ಪರಿಣಾಮ ಸ್ಕೂಟರ್ ಚಲಾಯಿಸುತ್ತಿದ್ದ ಅಪ್ಪ ಸಾವನ್ನಪ್ಪಿ ಮಗ ಪ್ರಾಣಾಪಾಯದಿಂದ ಪಾರಾದ ಘಟನೆ ಉಳ್ಳಾಲದ ಸುಂದರಿಭಾಗ್ ಎಂಬಲ್ಲಿ ಗುರುವಾರ ಸಂಜೆ ನಡೆದಿದೆ.
ಉಳ್ಳಾಲ ಕೋಟೆಪುರ ನಿವಾಸಿ, ಪ್ರಸ್ತುತ ಮುಕ್ಕಚ್ಚೇರಿಯಲ್ಲಿ ನೆಲೆಸಿರುವ ಇಬ್ರಾಹಿಂ (47) ಯಾನೆ ಕಮಾಲ್ ಮೃತರು. ಇಬ್ರಾಹಿಂ ಅವರು ಮಂಗಳೂರಿನ ಧಕ್ಕೆಯಲ್ಲಿ ಮೀನಿನ ವ್ಯವಹಾರ ನಡೆಸುತ್ತಿದ್ದರೆನ್ನಲಾಗಿದೆ. ನಿನ್ನೆ ಸಂಜೆ ತನ್ನ ಕಿರಿಯ ಮಗನನ್ನ ಸ್ಕೂಟರಿನಲ್ಲಿ ಕುಳ್ಳಿರಿಸಿ ಸುಂದರಿ ಭಾಗ್ ನಿಂದ ಮುಕ್ಕಚ್ಚೇರಿಯ ಮನೆಯ ಕಡೆ ತೆರಳುತ್ತಿದ್ದ ವೇಳೆ ಸ್ಕೂಟರ್ ನಿಯಂತ್ರಣ ತಪ್ಪಿ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದು ಬಳಿಕ ಆವರಣ ಗೋಡೆಯೊಂದಕ್ಕೆ ಬಡಿದ ಪರಿಣಾಮ ಇಬ್ರಾಹಿಂ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇಬ್ರಾಹಿಂ ಅವರ ಪುತ್ರನ ಕೈಗೆ ಏಟು ತಗುಲಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಮಂಗಳೂರು ದಕ್ಷಿಣ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


