ಉಡುಪಿ: ಕಳೆದ ಎರಡು ವರ್ಷದಿಂದ ಬ್ರಹ್ಮಾವರದ ನಾಲ್ಕೂರಿನ ಮನೆಯೊಂದರ ಮನೋರೋಗಿ ಮಹಿಳೆಯು ಕೊಠಡಿಯಲ್ಲಿ ಗೃಹಬಂಧನದಲ್ಲಿದ್ದು, ಇದೀಗ ಅವರನ್ನ ವಿಶು ಶೆಟ್ಟಿ ಅಂಬಲಪಾಡಿ ಅವರು ರಕ್ಷಿಸಿದ್ದಾರೆ.
ಗೃಹ ಬಂಧನದಿಂದ ರಕ್ಷಿಸಲ್ಪಟ್ಟವರನ್ನ ಬೇಬಿ (38) ಎನ್ನಲಾಗಿದೆ.
ಈ ಮನೋರೋಗಿ ಮಹಿಳೆಯನ್ನು ಖಚಿತ ಮಾಹಿತಿಯ ಆಧಾರದ ಮೇಲೆ ವಿಶು ಶೆಟ್ಟಿ ಅಂಬಲಪಾಡಿ ಅವರು ಸಖೀ ಸೆಂಟರಿನ ಸಿಬಂದಿ ಹಾಗೂ ಪೊಲೀಸ್ ಸಹಾಯದಿಂದ ರಕ್ಷಿಸಿ, ನಂತರದಲ್ಲಿ ಆಕೆಯನ್ನು ಬಾಳಿಗಾ ಆಸ್ಪತ್ರೆಗೆ ದಾಖಲಿಸಿದ್ದಾರೆ ಎನ್ನಲಾಗಿದೆ.
ಬೇಬಿ ಅವರು ವಿವಾಹಿತರಾಗಿದ್ದು ಇಬ್ಬರು ಚಿಕ್ಕ ಮಕ್ಕಳಿದ್ದಾರೆ. ವಿಶು ಶೆಟ್ಟಿ ಅವರು ಸ್ಥಳಕ್ಕೆ ತೆರಳಿದಾಗ ಕಿಟಕಿಯಲ್ಲಿ ಮಹಿಳೆ ತನ್ನನ್ನು ರಕ್ಷಿಸಿ, ಇಲ್ಲಿ ಬದುಕಲಾಗುತ್ತಿಲ್ಲ. ದಿನನಿತ್ಯ ಇವರು ನೀಡುವ ಮಾನಸಿಕ ಹಾಗೂ ದೈಹಿಕ ಹಿಂಸೆಯಿಂದ ಕಂಗಾಲಾಗಿದ್ದೇನೆ. ನನ್ನನ್ನು ದಯವಿಟ್ಟು ಪಾರು ಮಾಡಿ ಎಂದು ಅಂಗಲಾಚಿ ಬೊಬ್ಬಿಡುತ್ತಿದ್ದರು. ಇನ್ನು ಇವರಿಗೆ ಊಟವನ್ನು ಸಣ್ಣ ಕಿಟಕಿಯಿಂದ ನೀಡುತ್ತಿದ್ದು, ಇವರ ಕೊಠಡಿಗೆ ಮನೆಯವರು ಭದ್ರವಾಗಿ ಬಾಗಿಲು ಹಾಗೂ ಬೀಗ ಹಾಕಿದ್ದರು ಎನ್ನಲಾಗಿದೆ.