ನವದೆಹಲಿ: ಭಾರತ- ಪಾಕಿಸ್ತಾನ ನಡುವಿನ ಉದ್ವಿಗ್ನ ಪರಿಸ್ಥಿತಿ ಹಿನ್ನೆಲೆ ದೇಶದ 32 ವಿಮಾನ ನಿಲ್ದಾಣಗಳಲ್ಲಿ ವಿಮಾನ ಹಾರಾಟ ಸ್ಥಗಿತಗೊಳಿಸಲಾಗಿದೆ.
ಪಂಜಾಬ್ ನ ಅಮೃತಸರ, ಲುಧಿಯಾನ, ಪಟಿಯಾಲ, ಬಟಿಂಡಾ, ಪಟಿಯಾಲಾ, ಹಲ್ವಾರಾ,ಪಠಾಣ್ ಕೋಟ್, ಹಿಮಾಚಲ ಪ್ರದೇಶದ ಭುಂತರ್ , ಶಿಮ್ಲಾ ಮತ್ತು ಕಾಂಗ್ರಾ ಗಗ್ಗಲ್, ಕೇಂದ್ರಾಡಳಿತ ಪ್ರದೇಶದ ಚಂಡೀಗಢ, ಜಮ್ಮು ಮತ್ತು ಕಾಶ್ಮೀರದ ಶ್ರೀನಗರ, ಜಮ್ಮು, ಲಡಾಖ್‌ನ ಲೇಹ್, ರಾಜಸ್ಥಾನದ ಕಿಶೆಂಗಢ ಜೈಸಲ್ಮೇರ್, ಜೋಧಪುರ ಮತ್ತು ಬಿಕಾನೇರ್ ಮತ್ತು ಗುಜರಾತ್ ನ ಮುಂದ್ರ, ಜಾಮ್‌ನಗರ, ಹಿರಾಸರ್ , ಪೋರ್ ಬಂದರ್, ಕೇಶೋಡ್, ಕಾಂಡ್ಲಾ ಮತ್ತು ಭುಜ್ ವಿಮಾನ ನಿಲ್ದಾಣಗಳಲ್ಲಿ ವಿಮಾನ ಹಾರಾಟ ಸ್ಥಗಿತಗೊಳಿಸಲಾಗಿದೆ.
ಇನ್ನು ಹಲವಾರು ವಿಮಾನಯಾನ ಸಂಸ್ಥೆಗಳು ಈ ವಿಮಾನ ನಿಲ್ದಾಣಗಳಿಗೆ ತಮ್ಮ ವಿಮಾನಗಳನ್ನು ರದ್ದುಗೊಳಿಸಿವೆ. ಜಮ್ಮು, ಶ್ರೀನಗರ, ಲೇಹ್, ಜೋದ್‌ಪುರ, ಅಮೃತಸರ, ಚಂಡೀಗಡ, ಭುಜ್, ಜಾಮ್‌ನಗರ ಮತ್ತು ರಾಜ್‌ಕೋಟ್‌ಗೆ ಹೋಗುವ ಮತ್ತು ಅಲ್ಲಿಂದ ಹೊರಡುವ ವಿಮಾನಗಳನ್ನು ರದ್ದುಗೊಳಿಸುವುದಾಗಿ ಏರ್ ಇಂಡಿಯಾ ಘೋಷಿಸಿದೆ. ಬಾಧಿತ ಪ್ರಯಾಣಿಕರಿಗೆ ಪೂರ್ಣ ಮರುಪಾವತಿ ಅಥವಾ ಒಂದು ಬಾರಿ ಮರುಹಂಚಿಕೆ ವಿನಾಯಿತಿ ನೀಡಲಾಗುತ್ತಿದೆ. ಇಂಡಿಗೋ ಕೂಡ ಪಾಕಿಸ್ತಾನ ಗಡಿ ಸಮೀಪದ ಹಲವು ಬಾಧಿತ ನಗರಗಳಲ್ಲಿ ಕಾರ್ಯಾಚರಣೆಗಳ ರದ್ದುಗೊಳಿಸಿದೆ.
2 ದಿನಗಳಲ್ಲಿ ಒಟ್ಟು 229 ವಿಮಾನಗಳು ರದ್ದಾಗಿದ್ದು, ಈ ಪೈಕಿ ಶುಕ್ರವಾರದ 139 ವಿಮಾನಗಳು ರದ್ದಾಗಿದೆ. ಈ 138 ವಿಮಾನಗಳ ಪೈಕಿ ವಿದೇಶಗಳಿಂದ ಆಗಮಿಸಬೇಕಾಗಿದ್ದ ವಿಮಾನಗಳು 4 ದುತ್ತು ವಿದೇಶಕ್ಕೆ ನಿರ್ಗಮಿಸಬೇಕಿದ್ದ 5 ವಿಮಾನಗಳು ಸೇರಿವೆ. ಇನ್ನು ಪಾಕಿಸ್ತಾನ ಗಡಿ ಭಾಗಕ್ಕೆ ಸಮೀಪವಿರುವ 24 ವಿಮಾನ ನಿಲ್ದಾಣಗಳನ್ನು ಶನಿವಾರದವರೆಗೂ ಮುಚ್ಚುವಂತೆ ನಾಗರಿಕ ವಿಮಾನಯಾನ ಸಚಿವಾಲಯ ಸೂಚಿಸಿದೆ.


