ಉಪ್ಪಿನಂಗಡಿ; ನೆಕ್ಕಿಲಾಡಿ ಗ್ರಾಮದ ಬೋಳಂತಿಲದಲ್ಲಿ ಸರಣಿ ಕಳ್ಳತನ ಮಾಡಲಾಗಿದೆ. 34ನೇ ನೆಕ್ಕಿಲಾಡಿ ಗ್ರಾಮದ ಬೋಳಂತಿಲದಲ್ಲಿ ಗುರುವಾರ ಬೆಳಗ್ಗಿನ ಜಾವ ನಾಲ್ಕು ಮನೆಗಳಿಂದ ಸುಮಾರು 4.80 ಲಕ್ಷ ರೂ. ಹಾಗೂ ಆಭರಣಗಳನ್ನು ಕಳ್ಳತನ ಮಾಡಲಾಗಿದೆ.
ಅಜರುದ್ದೀನ್ ಅವರ ಮನೆ ಮಂದಿ ಕಾರ್ಯಕ್ರಮವೊಂದಕ್ಕೆ ಸಂಬಂಧಿಕರ ಮನೆಗೆ ಹೋಗಿದ್ದರು. ಈ ವೇಳೆ ಅವರ ಮನೆಯ ಮುಂಭಾಗದ ಬಾಗಿಲು ಮುರಿದಿದ್ದು, ಕಪಾಟಿನಲ್ಲಿದ್ದ 2.80 ಲಕ್ಷ ರೂ. ಕದ್ದಿದ್ದಾರೆ. ಅಜರುದ್ದೀನ್ ಅವರ ಬಾಡಿಗೆ ಮನೆಯಲ್ಲಿ ವಾಸವಿದ್ದ ನವಾಜ್ ಮನೆಯಿಂದ ಎರಡು ಲಕ್ಷ ರೂ. ಹಾಗೂ ಅರ್ಧ ಪವನ್ ತೂಕದ ಚಿನ್ನಾಭರಣವನ್ನೂ ಕಳ್ಳರು ಕದ್ದೊಯ್ದಿದ್ದಾರೆ.
ಪುತ್ತೂರು ತಾಲೂಕು ಪಂಚಾಯತ್ ಸಿಬ್ಬಂದಿ ಮಹಮ್ಮದ್ ಸಿರಾಜ್ ಅವರ ಮನೆಗೂ ಕಳ್ಳರು ನುಗ್ಗಿದ್ದು, ಕಪಾಟಿನಲ್ಲಿದ್ದ ಬೆಳ್ಳಿ ಗೆಜ್ಜೆ ಮೂರು ಸಾವಿರ ರೂ. ದೋಚಿಸಿದ್ದಾರೆ.ಗ್ರಾಮ ಪಂಚಾಯತ್ ಸದಸ್ಯೆ ರತ್ನಾವತಿಯವರ ಹಳೆಯ ಮನೆಗೂ ಕಳ್ಳರು ನುಗ್ಗಿದ್ದು, ಅಲ್ಲಿ ಯಾವುದೇ ವಸ್ತು ಕಳುವಾಗಿಲ್ಲ ಎನ್ನಲಾಗಿದೆ. ಮಹಮ್ಮದ್ ಸಿರಾಜ್ ಮನೆಯಲ್ಲಿ ನಗ ನಗದಿಗಾಗಿ ಜಾಲಾಡಿದ್ದಾರೆ. ಮನೆಯ ಫ್ರಿಡ್ಜ್ ನಲ್ಲಿಟ್ಟಿದ್ದ ತಿಂಡಿಗಳನ್ನು ಕಳ್ಳರು ತಿಂದು ಹೋಗಿದ್ದಾರೆ.ಘಟನಾ ಸ್ಥಳಕ್ಕೆ ಬೆರಳಚ್ಚು ತಜ್ಞರು, ಶ್ವಾನದಳವನ್ನು ಕರೆಸಲಾಗಿದೆ. ತನಿಖೆ ನಡೆಯುತ್ತಿದೆ.


