ಮಂಗಳೂರು; ತಮ್ಮ ಸೈಬರ್ ವಂಚನೆ ಕೃತ್ಯಕ್ಕೆ ಬಡ ಜನರ ಬ್ಯಾಂಕ್ ಅಕೌಂಟ್ ಗಳನ್ನು ಬಳಸುತ್ತಿದ್ದ ಇಬ್ಬರು ಖರ್ತನಾಕ್ ಗಳನ್ನು ಪೊಲೀಸರು ಬಂಧಿಸಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಬೆಳಗಾವಿಯ ತಹಸೀಲ್ದಾರ್ ಗಲ್ಲಿಯ ಅವಿನಾಶ್ ಸುತಾರ್ (28), ರಾಮದೇವ ಗಲ್ಲಿಯ ಅನೂಪ್ ಕಾರೇಕರ್ (42)ಬಂಧಿತ ಆರೋಪಿಗಳು.
ಆರೋಪಿಗಳು ಅಮಾಯಕರಿಗೆ ಸ್ವಲ್ಪ ಹಣ ನೀಡಿ ಅವರ ಹೆಸರಲ್ಲಿ ಬ್ಯಾಂಕ್ ಖಾತೆ ತೆರೆಯುತ್ತಿದ್ದರು. ಬಳಿಕ, ಆ ಬ್ಯಾಂಕ್ ಖಾತೆಗಳ ಮಾಹಿತಿಯನ್ನು ಪಡೆದುಕೊಂಡು, ಆನ್ ಲೈನ್ ಬ್ಯುಸಿನೆಸ್ ಮಾಡುವುದಾಗಿ ಹೇಳುತ್ತಿದ್ದರು. ಬಳಿಕ ಅಮಾಯಕರ ಬ್ಯಾಂಕ್ ಖಾತೆ ಮಾಹಿತಿಯನ್ನು ಸೈಬರ್ ವಂಚಕರಿಗೆ ನೀಡುತ್ತಿದ್ದರು. ನಂತರ, ಸೈಬರ್ ವಂಚಕರು ಈ ಬ್ಯಾಂಕ್ ಖಾತೆಗಳನ್ನು ಇಟ್ಟುಕೊಂಡು, ಶ್ರೀಮಂತ ಜನರಿಗೆ ವೀಡಿಯೊ ಕಾಲ್, ಡಿಜಿಟೆಲ್ ಅರೆಸ್ಟ್ ಸೇರಿದಂತೆ ಹಲವು ವಿಧಾನಗಳಲ್ಲಿ ಬ್ಲ್ಯಾಕ್ ಮೇಲ್ ಮಾಡಿತ್ತಿದ್ದರು. ನಂತರ ವಂಚಕರ ಜಾಲಕ್ಕೆ ಸಿಲುಕಿದವರ ಕಡೆಯಿಂದ ಮುಗ್ಧ ಜನರ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಿಸಿಕೊಳ್ಳುತ್ತಿದ್ದರು
ಪ್ರಕರಣ ಬಯಲಾಗಿದ್ದು ಹೇಗೆ?
ಮಂಗಳೂರಿನ ರಾಧಾಕೃಷ್ಣ ನಾಯಕ್ ಎಂಬುವರಿಗೆ ವಿಡಿಯೋ ಕಾಲ್ ಮಾಡಿ ನಿಮ್ಮನ್ನು ಡಿಜಿಟಲ್ ಅರೆಸ್ಟ್ ಮಾಡಿಸುತ್ತೇವೆ ಎಂದು ಅವರಿಂದ ಬರೋಬ್ಬರಿ 40 ಲಕ್ಷವನ್ನು ಪಡೆದಿದ್ದರು. ಕೊನೆಗೆ ಅನುಮಾನ ಗೊಂಡ ರಾಧಾಕೃಷ್ಣ ಅವರು ಪೊಲೀಸರಿಗೆ ದೂರ ನೀಡಿ ವಿಚಾರಣೆ ನಡೆಸಿದಾಗ ಬೆಳಗಾವಿಯ ಯಾರದು ಅಕೌಂಟ್ಗೆ ಹಣ ವರ್ಗಾವಣೆ ಆಗಿರುವುದು ಕಂಡುಬಂದಿದೆ. ಇದರ ಜಾಡು ಹಿಡಿದ ಪೊಲೀಸರು ಇಬ್ಬರು ಖದೀಮರನ್ನು ಬಂಧಿಸಿದ್ದಾರೆ.


