ಮಂಗಳೂರು; 4 ಲಕ್ಷ ಲಂಚ ಸ್ವೀಕರಿಸುವಾಗ ಸಿಕ್ಕಿ ಬಿದ್ದ ಮುಲ್ಕಿಯ ಕಂದಾಯ ನಿರೀಕ್ಷಕ ದಿನೇಶ್ ಜಾಮೀನು ಅರ್ಜಿ ವಜಾಗೊಂಡಿದ್ದು ನ್ಯಾಯಾಂಗ ಬಂಧನ ವಿಸ್ತರಣೆಯಾಗಿದೆ.
ದಿನಾಂಕ 19.12.2024 ರಂದು ಮುಲ್ಕಿಯ ಕಂದಾಯ ನಿರೀಕ್ಷಕರಾದ ದಿನೇಶ್ ದೂರುದಾರರಿಂದ ರೂ.4,00,000ಲಂಚದ ಹಣವನ್ನು ಸ್ವೀಕರಿಸುವಾಗ ದಸ್ತಗಿರಿ ಮಾಡಿದ್ದು, ಈ ಬಗ್ಗೆ ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 08/2024 ಕಲಂ 7(ಎ), 12 ಭ್ರಷ್ಟಾಚಾರ ನಿರ್ಬಂಧಕ ಕಾಯ್ದೆ, 1988 (ತಿದ್ದುಪಡಿ ಕಾಯ್ದೆ, 2018) ರಡಿ ಪ್ರಕರಣ ದಾಖಲಾಗಿರುತ್ತದೆ. ಮುಲ್ಕಿಯ ಕಂದಾಯ ನಿರೀಕ್ಷಕರಾದ ಶ್ರೀ ಜಿ.ಎಸ್ ದಿನೇಶ್ ರನ್ನು 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ (ವಿಶೇಷ) ನ್ಯಾಯಾಲಯ, ಮಂಗಳೂರು ಇಲ್ಲಿಗೆ ಹಾಜರುಪಡಿಸಿದ್ದು, ದಿ. 08.01.2025 ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿತ್ತು.
ಇಂದು ನ್ಯಾಯಾಂಗ ಬಂಧನದ ಅವಧಿ ಮುಕ್ತಾಯವಾದ ಹಿನ್ನೆಲೆ ಮತ್ತೆ ಕೋರ್ಟ್ ಮುಂದೆ ಹಾಜರುಪಡಿಸಲಾಗಿತ್ತು. ಈ ವೇಳೆ ಮುಲ್ಕಿಯ ಕಂದಾಯ ನಿರೀಕ್ಷಕ ಶ್ರೀ ಜಿ.ಎಸ್ ದಿನೇಶ್ ರವರು ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದು, 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ (ವಿಶೇಷ) ನ್ಯಾಯಾಲಯ, ಮಂಗಳೂರು ಇಲ್ಲಿನ ನ್ಯಾಯಾಧೀಶರಾದ ಶ್ರೀಮತಿ ಸಂಧ್ಯಾ ಎಸ್ ರವರು ವಿಚಾರಣೆ ನಡೆಸಿ, ಆರೋಪಿತರು ಜಾಮೀನು ಕೋರಿ ಸಲ್ಲಿಸಿದ ಅರ್ಜಿಯನ್ನು ವಜಾಗೊಳಿಸಿದ್ದಾರೆ. ಲೋಕಾಯುಕ್ತ ಸಂಸ್ಥೆಯ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕರಾದ ಶ್ರೀ ರವೀಂದ್ರ ಮುನ್ನಿಪ್ಪಾಡಿ ರವರು ವಾದಿಸಿರುತ್ತಾರೆ. ಆರೋಪಿತ ಅಧಿಕಾರಿಗೆ ನ್ಯಾಯಾಂಗ ಬಂಧನ ಮುಂದುವರಿದಿದೆ ಎಂದು ಮಂಗಳೂರು ಲೋಕಾಯುಕ್ತ ವಿಭಾಗದ ಪೊಲೀಸ್ ಅಧೀಕ್ಷಕರಾದ ಶ್ರೀ ನಟರಾಜ ಎಂ.ಎ ರವರು ತಿಳಿಸಿರುತ್ತಾರೆ. ಒಂದು ವರ್ಷಕ್ಕಿಂತ ಹೆಚ್ಚು ಕಾಲ ವಿಲೇವಾರಿಯಾಗದ ಕಡತವು ಲೋಕಾಯುಕ್ತ ಟ್ರ್ಯಾಪ್ ಕೇಸ್ ನಂತರ ಕೇವಲ 210 ರೂಪಾಯಿ ಸರ್ಕಾರ ನಿಗದಿಪಡಿಸಿದ ಶುಲ್ಕವನ್ನು ಪಡೆದು ಪಹಣಿಯಲ್ಲಿ ವಾರಸುದಾರರುಗಳ ಹೆಸರುಗಳ ಸೇರ್ಪಡೆಯಾಗಿರುತ್ತದೆ ಎಂಬುದಾಗಿ ದೂರುದಾರರು ಮಂಗಳೂರು ಲೋಕಾಯುಕ್ತ ಕಚೇರಿಗೆ ತಿಳಿಸಿ ಅಧಿಕಾರಿ/ಸಿಬ್ಬಂದಿಯವರಿಗೆ ಅಭಿನಂದನೆ ಸಲ್ಲಿಸಿರುತ್ತಾರೆ


