ಚಿತ್ರದುರ್ಗ: ಕಾರ್ಮಿಕನೋರ್ವ ಮಲದ ಗುಂಡಿಗಿಳಿದು ಉಸಿರುಗಟ್ಟಿ ಸಾವನ್ನಪ್ಪಿರುವ ಅಮಾನವೀಯ ಘಟನೆ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ಪಟ್ಟಣದಲ್ಲಿ ನಡೆದಿದೆ.
ಮೃತ ಕಾರ್ಮಿಕನನ್ನು ಚಳ್ಳಕೆರೆಯ ಗಾಂಧಿನಗರ ಬಡಾವಣೆಯ ರಂಗಸ್ವಾಮಿ (48) ಎಂದು ಗುರುತಿಸಲಾಗಿದೆ.
ಡಿ.18ರಂದು ಚಳ್ಳಕೆರೆ ಪಟ್ಟಣದಲ್ಲಿನ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ಈ ಘಟನೆ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಡಿ.23ರ ರಾತ್ರಿ ಚಳ್ಳಕೆರೆ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಾಗಿದ್ದು, ನೀರಿನ ತೊಟ್ಟಿಯಲ್ಲಿ ಮುಳುಗಿ ಕಾರ್ಮಿಕ ಸಾವೆಂದು ದೂರಿನಲ್ಲಿ ತಿಳಿಸಲಾಗಿತ್ತು. ಆದರೆ ಸಫಾಯಿ ಕರ್ಮಚಾರಿಗಳ ಸೇವಾ ಸಮಿತಿಯಿಂದ ಡಿಸಿ ಕಚೇರಿಗೆ ದೂರು ಸಲ್ಲಿಸಿ, ತನಿಖೆಗೆ ಆಗ್ರಹಿಸಿದ ಪರಿಣಾಮ ನಗರಸಭೆ ಕಂದಾಯ ನಿರೀಕ್ಷಕ ಗುರುಪ್ರಸಾದ್ ಸ್ಥಳ ಪರಿಶೀಲನೆ ನಡೆಸಿದ ವೇಳೆ ಈ ವಿಷಯ ಬೆಳಕಿಗೆ ಬಂದಿದೆ ಎನ್ನಲಾಗಿದೆ.
ಚಳ್ಳಕೆರೆ ಪೊಲೀಸ್ ಠಾಣೆಗೆ ನಗರಸಭೆ ಅಧಿಕಾರಿಯು ಕಲ್ಯಾಣ ಮಂಟಪದ ಮಾಲೀಕ ಗುರುವೀರ ನಾಯಕ್ ವಿರುದ್ಧ ದೂರು ಸಲ್ಲಿಸಿದ ಹಿನ್ನಲೆಯಲ್ಲಿ ಪ್ರಕರಣ ಸಂಬಂಧ ತನಿಖೆ ಚುರುಕಾಗಿದೆ.