ಮಂಗಳೂರು: ಕರಾವಳಿಯ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 24 ಸಾಧಕರಿಗೆ ಆದಿಚುಂಚನಗಿರಿ ಮಹಾಸಂಸ್ಥಾನದ ಮಂಗಳೂರು ಶಾಖಾ ಮಠದ ರಜತ ಮಹೋತ್ಸವ ಅಂಗವಾಗಿ ‘ಬಿಜಿಎಸ್ ಕರಾವಳಿ ರತ್ನ’ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
ಪ್ರಶಸ್ತಿ ಪ್ರದಾನ ಸಮಾರಂಭವನ್ನು ಕಾವೂರಿನ ಬಿಜಿಎಸ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದು, ಕೆ.ಚಿನ್ನಪ್ಪ ಗೌಡ (ಸಾಹಿತ್ಯ ಕ್ಷೇತ್ರ), ಪ್ರೊ.ಕೆ.ವಿ.ರಾವ್ (ವಿಜ್ಞಾನ), ಗುರುವಪ್ಪ ಎನ್.ಟಿ.ಬಾಳೆಪುಣಿ (ಮಾಧ್ಯಮ), ಡಾ.ರಮೇಶ್ ಡಿ.ಪಿ. (ವೈದ್ಯಕೀಯ), ಡಾ.ಸತೀಶ್ ಕಲ್ಲಿಮಾರ್ (ವೈದ್ಯಕೀಯ), ಪ್ರಕಾಶ್ ಅಂಚನ್ (ಶಿಕ್ಷಣ), ಮಾಧವ ಸುವರ್ಣ (ಧಾರ್ಮಿಕ), ಭಕ್ತಿ ಭೂಷಣ ದಾಸ್ (ಗೋಸೇವೆ), ಪುಷ್ಪಾವತಿ ಬುಡ್ಲೇಗುತ್ತು (ನಾಟಿ ವೈದ್ಯೆ), ವೀಣಾ ಕುಲಾಲ್ (ಸಮಾಜಸೇವೆ), ನರಸಿಂಹ ರಾವ್ ದೇವಸ್ಯ (ಕೃಷಿ), ಕೆ.ಎಸ್.ಗೋಪಾಲಕೃಷ್ಣ ಕಾಂಚೋಡು (ಕೃಷಿ), ಸುರೇಶ್ ಬಲ್ನಾಡು (ಕೃಷಿ), ಜಗದೀಶ ಆಚಾರ್ಯ (ಸಂಗೀತ), ಮಂಜುಳಾ ಸುಬ್ರಹ್ಮಣ್ಯ (ನೃತ್ಯ), ಶಿವರಾಮ ಪಣಂಬೂರು (ಯಕ್ಷಗಾನ), ಸುಜಾತಾ ಮಾರ್ಲ (ಯೋಗ), ಸಚಿನ್ ಸುಂದರ ಗೌಡ (ಉದ್ಯಮ), ರಾಧಾಕೃಷ್ಣ (ಉದ್ಯಮ), ಕೇಶವ ಅಮೈ (ಉದ್ಯಮ), ಕುಸುಮಾಧರ (ಉದ್ಯಮ), ಅಭಿಷೇಕ್ ಶೆಟ್ಟಿ (ಕ್ರೀಡೆ), ಮಾಧವ ಉಳ್ಳಾಲ್ (ಪರಿಸರ) ಹಾಗೂ ವಿಕ್ರಂ ಬಿ. ಶೆಟ್ಟಿ (ಚಿತ್ರಕಲೆ) ಅವರಿಗೆ ಆದಿಚುಂಚನಗಿರಿ ಕ್ಷೇತ್ರದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ, ಒಡಿಯೂರು ಗುರುದೇವಾನಂದ ಸ್ವಾಮೀಜಿ, ಆದಿಚುಂಚನಗಿರಿ ಮಹಾಸಂಸ್ಥಾನದ ಮಂಗಳೂರು ಶಾಖಾ ಮಠದ ಧರ್ಮಪಾಲನಾಥ ಸ್ವಾಮೀಜಿ, ಶೃಂಗೇರಿ ಶಾಖಾ ಮಠದ ಗುಣನಾಥ ಸ್ವಾಮೀಜಿ ‘ಬಿಜಿಎಸ್ ಕರಾವಳಿ ರತ್ನ’ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ನಿರ್ಮಲಾನಂದನಾಥ ಸ್ವಾಮೀಜಿ, ‘ಯುವಜನರಿಗೆ ಉತ್ತಮ ಶಿಕ್ಷಣ ನೀಡಿ, ಕೌಶಲಗಳನ್ನು ಕಲಿಸಿ ಅಭಿವೃದ್ಧಿಯತ್ತ ಹೆಜ್ಜೆಹಾಕಬೇಕಿದೆ. ಉದ್ಯೋಗವನ್ನು ಅರಸಿ ವಿದೇಶಗಳಿಗೆ ಯುವಕ ಯುವತಿಯರು ಹೋಗುವುದನ್ನು ತಡೆಯಬೇಕಿದೆ. ಇಲ್ಲವಾದಲ್ಲಿ ಭಾರತವು ಮುಂದಿನ 20 ವರ್ಷಗಳ ಬಳಿಕ ವೃದ್ಧರ ದೇಶವಾಗಿ ಹೊರಹೊಮ್ಮಬಹುದು’ ಎಂದರು.
ಒಡಿಯೂರು ಗುರುದೇವದತ್ತ ಸಂಸ್ಥಾನದ ಗುರುದೇವಾನಂದ ಸ್ವಾಮೀಜಿ ವೇದಿಕೆಯಲ್ಲಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಡಾ.ವೈ.ಭರತ್ ಶೆಟ್ಟಿ ವಹಿಸಿದ್ದರು. ಪಾಲಿಕೆ ಸದಸ್ಯ ಸುಮಂಗಲಾ ಭಾಗವಹಿಸಿದ್ದರು. ಸಂಜೀವ ಮಠಂದೂರು ಸ್ವಾಗತಿಸಿದರು. ರಣದೀಪ್ ಕಾಂಚನ್ ಕಾವೂರು ಧನ್ಯವಾದ ಸಲ್ಲಿಸಿದರು. ಹೊಸದಿಗಂತ ಸಿಇಒ ಪಿ.ಎಸ್.ಪ್ರಕಾಶ್ ಪ್ರಸ್ತಾವಿಕವಾಗಿ ಮಾತನಾಡಿದರು.