ಮೂಡುಬಿದಿರೆ: ಆರ್‌ಟಿಒ ಕಚೇರಿಗಳು ಭ್ರಷ್ಟಾಚಾರದ ಕೂಪವಾಗಿದ್ದು, ಲಂಚಕೋರತನದಿಂದ ಅಲ್ಲಿನ ಅಧಿಕಾರಿ ಹಾಗೂ ಸಿಬ್ಬಂದಿಗಳು ಖಾಸಗಿ ಬಸ್ಸುಗಳಿಗೆ ಯಾವುದೇ ಅವಶ್ಯಕ ಷರತ್ತುಗಳನ್ನು ಪೂರೈಸದಿದ್ದರೂ ಪಾಸಿಂಗ್ ನೀಡುತ್ತಿರುವುದರಿಂದ ಜನರ ಜೀವಕ್ಕೆ ಅಪಾಯವಾಗುತ್ತಿದೆ. ಇದಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಹಲವಾರು ಘಟನೆಗಳು ಕೂಡ ಮಂಗಳೂರು ವ್ಯಾಪ್ತಿಯಲ್ಲಿ ನಡದಿರುತ್ತದೆ.
ಮಂಗಳೂರು, ಮೂಡುಬಿದಿರೆ ಹಾಗೂ ಕಾರ್ಕಳ ಮಾರ್ಗವಾಗಿ ಓಡಾಡುವ ಖಾಸಗಿ ಬಸ್ಸುಗಳು ಮಿತಿ ಮೀರಿದ ವೇಗದಲ್ಲಿ ಚಲಿಸುತ್ತಿದ್ದು, ಇಂತಹ ಬಸ್ಸುಗಳಿಗೆ ಸ್ಪೀಡ್ ಲಿಮಿಟ್ ಅಳವಡಿಸದೆ ಆರ್‌ಟಿಒ ಕಚೇರಿಗಳು ಪಾಸಿಂಗ್ ನೀಡುವುತ್ತಿರುವುದು ಸಾರ್ವಜನಿಕ ಪಾಲಿಗೆ ಸಮಸ್ಯೆಯಾಗುತ್ತಿದೆ. ಇನ್ನು ಇತ್ತೀಚೆಗಷ್ಟೇ ಮಂಗಳೂರು-ಮೂಡುಬಿದಿರೆ ಮಾರ್ಗವಾಗಿ ಚಲಿಸುವ ಬಸ್ಸೊಂದನ್ನು ಅತ್ಯಂತ ವೇಗವಾಗಿ ಮತ್ತು ಅಜಾಗರೂಕತೆಯಿಂದ ಚಲಾಯಿಸಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ಕುರಿತಂತೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಈ ಘಟನೆಗೆ ಸಂಬಂಧಪಟ್ಟಂತೆ ಮೂಡುಬಿದಿರೆ ಪೊಲೀಸ್ ಇನ್ಸ್‌ಪೆಕ್ಟರ್ ಸಂದೇಶ್ ಪಿ.ಜಿ. ಅವರು ಸಾರ್ವಜನಿಕರ ಕೋರಿಕೆಯಂತೆ ಸ್ಪೀಡ್ ಆಗಿ ಚಲಾಯಿಸಲ್ಪಟ್ಟಿದ್ದ KA 19 AB 1339 ನಂಬರ್‌ನ ಜೈನ್ ಬಸ್ಸನ್ನು ವಶಕ್ಕೆ ಪಡೆದು, ಚಾಲಕನ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು ಕರ್ತವ್ಯ ನಿಷ್ಠೆ ಮೆರೆದಿದ್ದಾರೆ. ವಶಕ್ಕೆ ಪಡೆಯಲಾದ ಬಸ್ಸನ್ನು ಮೂಡಬಿದ್ರೆ ಪೊಲೀಸ್ ಠಾಣಾ ಆವರಣದಲ್ಲಿ ಇರಿಸಲಾಗಿದೆ.
ಇನ್ನು ಜೈನ್ ಬಸ್ ಚಾಲಕ ಇತರ ಗಾಡಿಗಳನ್ನು ಓವರ್ ಟೇಕ್ ಮಾಡುವ ಭರದಲ್ಲಿ ಎದುರುಗಡೆಯಿಂದ ಬರುತ್ತಿದ್ದ ವಾಹನಗಳನ್ನೂ ಕೂಡಾ ಲೆಕ್ಕಿಸದೆ ಚಲಾಯಿಸಿರುವುದು ವಿಡಿಯೋದಲ್ಲಿ ಕಂಡುಬಂದಿದ್ದು, ವಿಡಿಯೋ ನೋಡಿ ಗಾಬರಿಯಾಗಿರುವ ಶಾಲಾ ಕಾಲೇಜು ವಿದ್ಯಾರ್ಥಿಗಳ ಪೋಷಕರು, ತಮ್ಮ ಮಕ್ಕಳನ್ನು ಬಸ್ಸುಗಳಲ್ಲಿ ಕಳುಹಿಸಲು ಹೆದರುವಂತಾಗಿದೆ ಎಂದು ಪ್ರತಿಕ್ರಿಯಿಸಿದ್ದರು. ಇಂತಹ ಚಾಲಕರಿಗೆ ಪರವಾನಿಗೆ ನೀಡುವ ಮತ್ತು ಬಸ್ಸುಗಳಿಗೆ ಸ್ಪೀಡ್ ಲಿಮಿಟ್ ಅಳವಡಿಸದೆ ಪಾಸಿಂಗ್ ನೀಡುವ RTO ಬಗ್ಗೆ ಸಾರ್ವಜನಿಕರಲ್ಲಿ ಆಕ್ರೋಶ ವ್ಯಕ್ತವಾಗಿತ್ತು.
KA 19 AB 1339 ನಂಬರ್‌ನ ಜೈನ್ ಬಸ್ ನ ಇದೇ ಚಾಲಕ ಈ ಹಿಂದೆಯೂ ಮೂಡಬಿದ್ರೆಯ ಗಾಂಧಿನಗರದ ಬಳಿ ನಿಲ್ಲಿಸಿದ್ದಂತಹ ಶಾಲಾ ಮಕ್ಕಳ ರಿಕ್ಷಾವೊಂದಕ್ಕೆ ವೇಗವಾಗಿ ಗುದ್ದಿ ಅಪಘಾತ ಮಾಡಿದ್ದ ಬಗ್ಗೆ ಕೇಳಿಬಂದಿತ್ತು. ಜೈನ್ ಪೇಟೆಯ ಕಿರಿದಾದ ರಸ್ತೆಯಲ್ಲಿ ವೇಗವಾಗಿ ಸಂಚರಿಸಿ ರಸ್ತೆಬದಿಯ ಮನೆಯೊಂದರ ಹಂಚು ಹಾರಿಸಿಕೊಂಡು ಹೋಗಿದ್ದ, ಹಾಗೂ ಗಂಜಿಮಠ ಸಮೀಪ ಬೈಕ್ ಗೆ ಡಿಕ್ಕಿ ಹೊಡೆದು ಬೈಕ್ ಸವಾರ ಗಂಭೀರ ಗಾಯಗೊಳ್ಳುವಂತೆ ಮಾಡಿದ್ದ ಬ್ಗಗೆಯೂ ಆರೋಪಗಳು ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೆಯಾಗಿದ್ದವು.


