ಕಾರ್ಕಳ:ಯುವತಿಯ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಮತ್ತಿಬ್ಬರನ್ನು ಬಂಧಿಸಿದ್ದಾರೆ. ಬಂಧಿತರ ವಿಚಾರಣೆ ವೇಳೆ ಹಲವು ವಿಚಾರಗಳು ಬಯಲಾಗಿವೆ. ಸಿಯಾಜ್ ಮತ್ತು ಗಿರಿ ಬಂಧಿತರು. ಇವರಲ್ಲಿ ಸಿಯಾಜ್ ಕಾರ್ಕಳದವನಾಗಿದ್ದರೆ, ಗಿರಿ ಆಂಧ್ರಪ್ರದೇಶದವನು ಎಂದು ಗುರುತಿಸಲಾಗಿದೆ. ಇವರಿಬ್ಬರು ಪ್ರಮುಖ ಆರೋಪಿ ಅಲ್ತಾಫ್ ಗೆ ಡ್ರಗ್ ಪೂರೈಕೆ ಮಾಡಿದ ಆರೋಪ ಎದುರಿಸುತ್ತಿದ್ದಾರೆ.
ಆ. 24ರಂದು 21ರ ಹರೆಯದ ಹಿಂದೂ ಯುವತಿಯನ್ನು ಪುಸಲಾಯಿಸಿ ಅಪಹರಿಸಿ ಕೌಡೂರು ಬಳಿಯ ರಂಗನಪಲ್ಕೆಯ ಕಾಡಿನಲ್ಲಿ ಆಕೆಯ ಮೇಲೆ ಅತ್ಯಾಚಾರ ಎಸಗಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ ಅಲ್ತಾಫ್, ಶ್ರಾವೆದ್ ರಿಚರ್ಡ್ ಕ್ವಾಡ್ರಸ್ ಹಾಗೂ ಅಭಯ್ ಅವರನ್ನು ಬಂಧಿಸಲಾಗಿತ್ತು. ಯುವತಿಗೆ ನೀಡಲಾದ ಡ್ರಗ್ಸ್ ಮೂಲದ ಬಗ್ಗೆ ತನಿಖೆಯನ್ನು ತೀವ್ರಗೊಳಿಸಿದ್ದು, ಅದು ಬೆಂಗಳೂರು, ತಿರುಪತಿಯಿಂದ ಸರಬರಾಜು ಆಗಿರುವುದು ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಅಭಯ್ ಹಾಗೂ ಈ ಇಬ್ಬರು ಬಂಧಿತರನ್ನು ಪೊಲೀಸರು ಬೆಂಗಳೂರು ಹಾಗೂ ತಿರುಪತಿಗೆ ಕರೆದೊಯ್ದು ತನಿಖೆ ನಡೆಸಿದ್ದರು.


