ಬೆಂಗಳೂರು: ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರ ರಕ್ಷಣೆಗಾಗಿ ಬುಲೆಟ್ ಪ್ರೂಫ್ ಕಾರಿನ ಜೊತೆಗೆ ಝಡ್ ಪ್ಲಸ್ ರಕ್ಷಣೆಯನ್ನು ನೀಡಲಾಗಿದೆ.
ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಅಭಿಯೋಜನೆಗೆ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ಅವರ ವಿರುದ್ಧ ಆಕ್ರೋಶ ವ್ಯಕ್ತವಾಗಿದ್ದು, ಈ ಹಿನ್ನೆಲೆಯಲ್ಲಿ ಇಂತಹ ಕ್ರಮ ಕೈಗೊಳ್ಳಲಾಗಿದೆ. ಹಾಗೆಯೇ ಆ. 29ರ ವರೆಗೆ ರಾಜ್ಯಪಾಲರ ಎಲ್ಲ ಕಾರ್ಯಕ್ರಮಗಳನ್ನೂ ರದ್ದುಗೊಳಿಸಲಾಗಿದೆ.
ಗುಪ್ತಚರ ಇಲಾಖೆಯು ರಾಜ್ಯಪಾಲರು ಭಾಗವಹಿಸುವ ಕಾರ್ಯಕ್ರಮಗಳಲ್ಲಿ ದಾಂಧಲೆ ನಡೆಸುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಿದ್ದು, ಈ ಹಿನ್ನೆಲೆಯಲ್ಲಿ ಈಗಿರುವ ಝಡ್ ಫ್ಲಸ್ ಭದ್ರತೆ ಜತೆಗೆ 40 ಮಂದಿ ಹೆಚ್ಚುವರಿ ಪೊಲೀಸ್ ಸಿಬಂದಿಯನ್ನು ಒದಗಿಸಲಾಗಿದೆ.
ಇದೇ ತಿಂಗಳು 29 ಗುರುವಾರದಂದು ಅಭಿಯೋಜನೆ ಅನುಮತಿ ವಿಚಾರಣೆ ನಡೆಯಲಿದ್ದು, ಅಲ್ಲಿಯವರೆಗೆ ಯಾವುದೇ ಕಾರ್ಯಕ್ರಮದಲ್ಲಿ ಭಾಗವಹಿಸದೆ ಇರಲು ರಾಜ್ಯಪಾಲರು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ. ಇನ್ನು ಬೆಂಗಳೂರಿನಲ್ಲಿ ಬುಧವಾರದಂದು ನಡೆದ ಘಟಿಕೋತ್ಸವ ಕಾರ್ಯಕ್ರಮದಲ್ಲಿಯೂ ಅವರು ಭಾಗಿಯಾಗಿಲ್ಲ. ರಾಜ್ಯ ಪಾಲರಿಗೆ ಈ ಹಿಂದೆಯೇ ಬುಲೆಟ್ ಪ್ರೂಫ್ ಕಾರು ಇದೆಯಾದರೂ ಬಳಸುತ್ತಿರಲಿಲ್ಲ ಎಂದು ಮಾಹಿತಿ ದೊರಕಿದೆ.


