ಮಂಗಳೂರು: ಲೋಕಸಭಾ ಚುನಾವಣೆ-2024ರ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆಯು ನಡೆಯಿತು
ಸಭೆಯ ಅಧ್ಯಕ್ಷತೆ ವಹಿಸಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ‘ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಎಲ್ಲಾ ರಾಜಕೀಯ ಪಕ್ಷಗಳ ಸಭೆ, ಸಮಾರಂಭ, ಚುನಾವಣಾ ಪ್ರಚಾರಗಳಿಗೆ ಅಗತ್ಯವಾಗಿರುವ ಪೂರ್ವಾನುಮತಿಯನ್ನು ಕಡ್ಡಾಯವಾಗಿ ಪಡೆದುಕೊಳ್ಳಬೇಕು,’ ಎಂದು ಸೂಚನೆ ನೀಡಿದರು.
ಇನ್ನು ರಾಜಕೀಯ ಪಕ್ಷಗಳ ವತಿಯಿಂದ ನಡೆಯುವ ಸಭೆ-ಸಮಾರಂಭ, ಪ್ರಚಾರ ಕಾರ್ಯಕ್ರಮಗಳಿಗೆ, ವಾಹನ ಬಳಕೆಗಾಗಿ ಅನುಮತಿ ಪಡೆಯಲು ಚುನಾವಣಾಧಿಕಾರಿಗಳ ಕಚೇರಿಯಲ್ಲಿ ತೆರೆಯಲಾಗಿರುವ ಏಕ ಗವಾಕ್ಷಿ ಪದ್ಧತಿಯಡಿ ಅರ್ಜಿ ಸಲ್ಲಿಸುವುದು ಕಡ್ಡಾಯ. ಆನ್ ಲೈನ್ ನ ಮೂಲಕ ಅರ್ಜಿ ಸಲ್ಲಿಸುವವರು ಭಾರತ ಚುನಾವಣಾ ಆಯೋಗವು ಪರಿಚಯಿಸಿರುವ ‘ಸುವಿಧಾ ಆಪ್’ ಬಳಕೆ ಮಾಡಬಹುದು. ಜಿಲ್ಲಾ ಮಟ್ಟದ ಕಾರ್ಯಕ್ರಮಗಳಿಗೆ ಮತ್ತು ವಾಹನ ಪರವಾನಿಗೆಗಾಗಿಯೂ ಅನುಮತಿ ಪಡೆಯಬೇಕು. ಸ್ಟಾರ್ ಪ್ರಚಾರಕರು ಹಾಗೂ ಪ್ರಚಾರ ಸ್ಥಳಗಳ ಬಗ್ಗೆ ಮುಂಚಿತವಾಗಿ ಮಾಹಿತಿ ನೀಡಬೇಕು ಎಂದು ತಿಳಿಸಿದರು.
ಇಂದು ಸೂಚಿಸಿರುವ ನಿಯಮಗಳನ್ನು ಪ್ರತಿಯೊಬ್ಬ ಪಕ್ಷದವರು ಅನುಸರಿಸಬೇಕಾಗಿದೆ. ಮಾದರಿ ನೀತಿ ಸಂಹಿತೆಯು ಎಲ್ಲಾ ಪಕ್ಷಗಳು, ಅಭ್ಯರ್ಥಿಗಳಿಗೂ ಅನ್ವಯವಾಗಲಿದ್ದು ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು. ನಿಯಮಗಳನ್ನು ಪಾಲನೆ ಮಾಡುವುದರಿಂದ ಮುಕ್ತ, ನ್ಯಾಯಸಮ್ಮತ, ಪಾರದರ್ಶಕವಾಗಿ ಚುನಾವಣೆ ನಡೆಸಲು ಸಹಕಾರಿಯಾಗುತ್ತದೆ. ಈ ನಿಟ್ಟಿನಲ್ಲಿ ಎಲ್ಲಾ ಪಕ್ಷಗಳು ಸಹ ಸಹಕಾರ ನೀಡಬೇಕೆಂದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಡಾ.ಆನಂದ್, ಅಪರ ಜಿಲ್ಲಾಧಿಕಾರಿ ಡಾ. ಸಂತೋಷ್ ಕುಮಾರ್, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.


