ನ್ಯೂಸ್ ಡೆಸ್ಕ್; ಚೆಸ್ ವಿಶ್ವಕಪ್ ಫೈನಲ್ 2023ರಲ್ಲಿ ವಿಶ್ವ ನಂ. 1 ನಾರ್ವೆಯ ಮ್ಯಾಗ್ನಸ್ ಕಾರ್ಲ್ಸೆನ್ ಎದುರು ಭಾರತದ 18 ವರ್ಷದ ರಮೇಶ್ಬಾಬು ಪ್ರಗ್ನಾನಂದ ಮಂಡಿಯೂರಿದ್ದಾರೆ. ಪಂದ್ಯದಲ್ಲಿ ಸೋತರೂ ಪ್ರಗ್ನಾನಂದ ಕೋಟ್ಯಂತರ ಭಾರತೀಯರ ದಿಲ್ ಕದ್ದಿದ್ದಾರೆ.
ಬುಧವಾರ ನಡೆದ 2ನೇ ಗೇಮ್ನಲ್ಲಿ ಕಪ್ಪು ಕಾಯಿಗಳೊಂದಿಗೆ ಚದುರಂಗ ಚಲನೆ ಆರಂಭಿಸಿದ್ದ ಪ್ರಜ್ಞಾನಂದ ಆರಂಭದಲ್ಲೇ ಸಮಬಲದ ಹೋರಾಟ ನಡೆಸಿದ್ದರು. ಕಾರ್ಲ್ಸೆನ್ ಜಾಣ ಚಲನೆಗೆ ಅತ್ಯುತ್ತಮ ಚೆಕ್ ನಡೆಗಳ ಮೂಲಕ ಪ್ರಜ್ಞಾನಂದ ಪ್ರತ್ಯುತ್ತರ ನೀಡಿದ್ದರು. ಪರಿಣಾಮ 22 ನಡೆಗಳ ನಂತರ ಕೂಡ ಪಂದ್ಯವು ಸಮತೋಲಿತವಾಗಿತ್ತು.
ಈ ಸಮಬಲವನ್ನು ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾದ ಕಾರ್ಲ್ಸೆನ್ 30 ನಡೆಗಳ ನಂತರ ಪಂದ್ಯವನ್ನು ಡ್ರಾಗೊಳಿಸಿದರು. ಇದರೊಂದಿಗೆ ಫೈನಲ್ ಪಂದ್ಯವು ಟೈಬ್ರೇಕ್ನತ್ತ ಸಾಗಿತು.ಗುರುವಾರ ನಡೆದ ಟೈಬ್ರೇಕ್ನ ಮೊದಲ ಸುತ್ತಿನ ಫಸ್ಟ್ ಗೇಮ್ನ 16 ಚಲನೆಗಳ ನಂತರ, ಕಾರ್ಲ್ಸೆನ್ನ ‘ಬಿಷಪ್’ ಗಾಗಿ ಪ್ರಜ್ಞಾನಂದ ತನ್ನ ‘ನೈಟ್’ (ಹೋರ್ಸ್ ಹೆಡ್) ಅನ್ನು ತ್ಯಾಗ ಮಾಡಿದರು. ಇದರ ಬೆನ್ನಲ್ಲೇ ಇಬ್ಬರು ತಮ್ಮ ರಾಣಿಯನ್ನೂ ಕೂಡ ಕಳೆದುಕೊಂಡರು. ಆದರೆ 21ನೇ ನಡೆಯ ವೇಳೆಗೆ ಕಾರ್ಲ್ಸೆನ್ ಪಂದ್ಯದ ಮೇಲೆ ಹಿಡಿತ ಸಾಧಿಸಿದ್ದರು. ಇದೇ ವೇಳೆ ಪ್ರಜ್ಞಾನಂದ ರಕ್ಷಣಾತ್ಮಕ ಆಟಕ್ಕೆ ಒತ್ತು ನೀಡಿದರು.
ಈ ಜಾಣ ನಡೆಯ ಮೂಲಕ 25 ನಡೆಗಳ ಬಳಿಕ ಪ್ರಜ್ಞಾನಂದ ಸಮಬಲ ಸಾಧಿಸುವಲ್ಲಿ ಯಶಸ್ವಿಯಾದರು. ಆದರೆ 34 ನಡೆಗಳ ವೇಳೆಗೆ ಇಬ್ಬರು ರೂಕ್ ಕಾಯಿಕೆಯನ್ನು ಕಳೆದುಕೊಂಡಿದ್ದರು. ಇದಾಗ್ಯೂ 47 ಮೂವ್ಗಳ ಬಳಿಕ ಟೈಬ್ರೇಕ್ನ ಮೊದಲ ಗೇಮ್ನಲ್ಲಿ ಜಯ ಸಾಧಿಸುವಲ್ಲಿ ಯಶಸ್ವಿಯಾದ ಕಾರ್ಲ್ಸೆನ್ 1-0 ಮುನ್ನಡೆ ಸಾಧಿಸಿದರು.
ಇತ್ತ ಮಾಡು ಇಲ್ಲವೇ ಮಡಿ ಸ್ಥಿತಿಯಲ್ಲಿ ಟೈಬ್ರೇಕ್ನ 2ನೇ ಗೇಮ್ ಅನ್ನು ಆರಂಭಿಸಿದ್ದ ಪ್ರಜ್ಞಾನಂದ ಪ್ರಾರಂಭದಲ್ಲೇ ಹಿನ್ನಡೆ ಅನುಭವಿಸಿದರು. ಅಲ್ಲದೆ ಪ್ರತಿ ಚಲನೆಗೂ ಹೆಚ್ಚಿನ ಸಮಯ ತೆಗೆದುಕೊಂಡರು. ಈ ಹಂತದಲ್ಲಿ ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದ ಕಾರ್ಲ್ಸೆನ್ ಮ್ಯಾಚ್ ಅನ್ನು ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾದರು. ಈ ಮೂಲಕ 1-0 ಅಂತರದಿಂದ ಜಯ ಸಾಧಿಸಿ ಕಾರ್ಲ್ಸೆನ್ ವಿಶ್ವ ಚಾಂಪಿಯನ್ ಪಟ್ಟ ಅಲಂಕರಿಸಿದರು.