ಮುಜಾಫರ್ ಪುರ: ಇತ್ತೀಚೆಗಷ್ಟೇ ಬಾಲಿವುಡ್ನ ಖ್ಯಾತ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆಗೆ ಶರಣಾಗಿದ್ದರು. ಮುಂಬೈನ ಬಾಂದ್ರಾದಲ್ಲಿರುವ ಅವರ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಅವರ ಮೃತದೇಹ ಪತ್ತೆಯಾಗಿತ್ತು. ಈ ಕುರಿತು ಪೊಲೀಸರ ತನಿಖೆ ಪ್ರಗತಿಯಲ್ಲಿದ್ದು, ಇದೀಗ ಪ್ರಕರಣ ಸಂಬಂಧ ಸುಶಾಂತ್ ಗೆಳತಿ ರಿಯಾ ಚಕ್ರವರ್ತಿ ವಿರುದ್ಧ ಬಿಹಾರದ ಮುಜಾಫರ್ ಪುರ ಕೋರ್ಟ್ನಲ್ಲಿ ದೂರು ದಾಖಲಾಗಿದೆ.
ರಿಯಾ ಚಕ್ರವರ್ತಿ ಪರೋಕ್ಷವಾಗಿ ಸುಶಾಂತ್ ಸಿಂಗ್ ಆತ್ಮಹತ್ಯೆಗೆ ಕಾರಣರಾಗಿದ್ದಾರೆ ಎಂದು ಕುಂದನ್ ಕುಮಾರ್ ಎಂಬುವರು ದೂರು ನೀಡಿದ್ದು ಜೂನ್ 24ರಂದು ವಿಚಾರಣೆ ದಿನಾಂಕ ನಿಗದಿಯಾಗಿದೆ. ಸುಶಾಂತ್ ಸಿಂಗ್ ಸಾವಿನ ತನಿಖೆ ಕೈಗೊಂಡಿರುವ ಮುಂಬೈನ ಬಾಂದ್ರಾ ಪೊಲೀಸರು ಗುರುವಾರ 9 ಗಂಟೆಗಳ ಕಾಲ ರಿಯಾ ಚಕ್ರವರ್ತಿ ವಿಚಾರಣೆ ನಡೆಸಿ ಮಾಹಿತಿ ಸಂಗ್ರಹಿಸಿದ್ದಾರೆ ಎನ್ನಲಾಗಿದೆ.
ಈ ನಡುವೆ ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಹಾರದ ಸ್ಥಳೀಯ ಕೋರ್ಟ್ ನಲ್ಲಿ ಸಲ್ಮಾನ್ ಖಾನ್, ನಿರ್ದೇಶಕ, ನಿರ್ಮಾಪಕ ಕರಣ್ ಜೋಹರ್ ಸೇರಿದಂತೆ ಎಂಟು ಮಂದಿ ವಿರುದ್ಧ ಪ್ರಕರಣ ದಾಖಲಾಗಿತ್ತು. ಇದೀಗ ರಿಯಾ ಮೇಲೆ ಕೇಸ್ ದಾಖಲಾಗಿದ್ದು, ಪೊಲೀಸರ ಸಮರ್ಥ ತನಿಖೆಯ ಬಳಿಕವೇ ಸುಶಾಂತ್ ಸಿಂಗ್ ಆತ್ಮಹತ್ಯೆ ಹಿಂದಿನ ಅಸಲಿಯತ್ತು ಬೆಳಕಿಗೆ ಬರಲಿದೆ.


