ಬೆಳ್ತಂಗಡಿ: ಕದ್ದ ಬೈಕ್ ನಲ್ಲಿ ಯುವಕನೊಬ್ಬ ತನ್ನ ಪ್ರೇಯಸಿ ಜೊತೆ ಜಾಲಿ ರೈಡ್ ಮಾಡಿರುವ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ.
ಧರ್ಮಸ್ಥಳ ಗ್ರಾಮದ ಖಾಸಗಿ ಬಸ್ ನಿಲ್ದಾಣದ ಬಳಿ ಕಾಲೇಜು ವಿದ್ಯಾರ್ಥಿಯೋರ್ವ ನಿಲ್ಲಿಸಿದ್ದ ಬೈಕ್ ಕಳ್ಳತನ ಮಾಡಿದ ಘಟನೆ ಡಿ. 16ರಂದು ನಡೆದಿತ್ತು. ಮೂಡಬಿದಿರೆ ಖಾಸಗಿ ಕಾಲೇಜೊಂದರ ವಿದ್ಯಾರ್ಥಿ ಶಿಶಿಲ ಗ್ರಾಮದ ಕಂಚಿನಡ್ಕ ನಿವಾಸಿ ಜೀವನ್ ಅವರು ಸಂಬಂಧಿಕರ ಮನೆಯಾದ ಧರ್ಮಸ್ಥಳದಿಂದ ಕಾಲೇಜು ತೆರಳುತ್ತಿದ್ದರು.
ಡಿ. 16ರಂದು ಬೆಳಗ್ಗೆ ಧರ್ಮಸ್ಥಳದಲ್ಲಿ ತನ್ನ ಬೈಕ್ ಅನ್ನು ನಿಲ್ಲಿಸಿ ಕಾಲೇಜಿಗೆ ತೆರಳಿದ್ದರು. ಮಧ್ಯಾಹ್ನ ಕಾಲೇಜಿನಿಂದ ವಾಪಸ್ ಬಂದಾಗ ಬೈಕ್ ನಾಪತ್ತೆಯಾಗಿತ್ತು. ಕಳವಾದ ಬೈಕ್ ಮೌಲ್ಯ ಅಂದಾಜು 15,000 ರೂ. ಆಗಬಹುದೆಂದು ಅಂದಾಜಿಸಲಾಗಿದ್ದು, ಈ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇನ್ನು ಇದೇ ಕದ್ದ ಬೈಕ್‌ನಲ್ಲಿ ಓರ್ವ ಹುಡುಗ ಹಾಗೂ ಹುಡುಗಿ ಹೋಗುತ್ತಿರುವ ದೃಶ್ಯ ಸಿಸಿ ಕೆಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.


