ಬೆಂಗಳೂರು: ಪಿಎಫ್ ಐ ಸಂಘಟನೆಯನ್ನು ನಿಷೇಧಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದ ಬೆನ್ನಲ್ಲೇ ಸಂಘಟನೆಗೆ ಸಂಬಂಧಿಸಿದಂತೆ ಒಂದೊಂದೇ ಸಂಗತಿಗಳು ಬಯಲಾಗುತ್ತಿವೆ. ಇದೀಗ ಕರಾವಳಿಯಲ್ಲಿ ಪಿಎಫ್ಐ ತನ್ನ ಕಾರ್ಯಕರ್ತರಿಗೆ ತರಬೇತಿ ನೀಡುತ್ತಿದ್ದ ಜಾಗವೊಂದರ ಮಾಹಿತಿ ಪೊಲೀಸರಿಗೆ ಸಿಕ್ಕಿದ್ದು, ಈ ಬಗ್ಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರೇ ಖಚಿತಪಡಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲೂಕಿನಲ್ಲಿ ತರಬೇತಿ ನೀಡುತ್ತಿದ್ದರು. ಈ ಬಗ್ಗೆ ಕೆಲವು ಮಾಹಿತಿ ಸಿಕ್ಕಿದ್ದು, ಸಂಪೂರ್ಣ ತನಿಖೆ ನಡೆಸಲಾಗುತ್ತಿದೆ ಎಂದು ಗೃಹಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ. ಉಗ್ರರೊಂದಿಗೆ ಸಂಪರ್ಕ ಹೊಂದಿರುವ ಆರೋಪದ ಮೇಲೆ ದೇಶಾದ್ಯಂತ ಪಿಎಫ್ಐ ಕಚೇರಿ ಹಾಗೂ ಮುಖಂಡರ ಮೇಲೆ ಎನ್ಐಎ ಮತ್ತು ಪೊಲೀಸರು ನಡೆಸಿದ ದಾಳಿಯಲ್ಲಿ ಅನೇಕರನ್ನು ಬಂಧಿಸಲಾಗಿದ್ದು, ಕೇಂದ್ರ ಸರ್ಕಾರ ಐದು ವರ್ಷ ಸಂಘಟನೆಯನ್ನು ನಿಷೇಧಿಸಿದೆ. ಅಲ್ಲದೆ ಬಂಧಿತ ಆರೋಪಿಗಳನ್ನು ತೀವ್ರವಾಗಿ ವಿಚಾರಣೆ ನಡೆಸಲಾಗುತ್ತಿದ್ದು, ಆಘಾತಕಾರಿ ಮಾಹಿತಿಗಳು ಒಂದೊಂದಾಗಿಯೇ ಹೊರಬೀಳುತ್ತಿದೆ. ಈ ಪೈಕಿ ಕಾರ್ಯಕರ್ತರಿಗೆ ಉಗ್ರ ಮಾದರಿಯ ತರಬೇತಿ ನೀಡುತ್ತಿದ್ದ ಸಂಗತಿಯೂ ಒಂದಾಗಿದೆ ಎಂದು ಅವರು ಹೇಳಿದ್ದಾರೆ.