ಬೆಳ್ತಂಗಡಿ: ಕೊರೊನಾ ಹಿನ್ನಲೆ ಲಾಕ್ ಡೌನ್ ನಿಂದ ಸಂಕಷ್ಟದಲ್ಲಿರುವ ತಾಲೂಕಿನಲ್ಲಿ ರಾಜಕೀಯ ರಹಿತವಾಗಿ ಸರ್ವಧರ್ಮಿಯರಿಗೆ ತಾಲೂಕಿನ 30,000 ಕುಟುಂಬಗಳಿಗೆ ಆಹಾರ ಸಮಾಗ್ರಿಗಳ ಕಿಟ್ ಶಾಸಕ ಹರೀಶ್ ಪೂಂಜ ಇವರ “ಶ್ರಮಿಕ ನೆರವು” ಇದರ ವತಿಯಿಂದ ವಿತರಿಸಲು ಆಹಾರದ ಕಿಟ್ ತಯಾರಿಕೆಯು ಉಜಿರೆಯ ಜನಾರ್ಧನ ಸ್ವಾಮಿ ದೇವಸ್ಥಾನದ ಸಭಾ ಭವನದಲ್ಲಿ ಉದ್ಯಮಿಗಳಾದ ಮೋಹನ್ ಕುಮಾರ್ ಲಕ್ಷ್ಮೀ ಗ್ರೂಪ್ಸ್ ,ಹಾಗೂ ರಾಜೇಶ್ ಪೈ ಸಂದ್ಯಾ ಟ್ರೇಡರ್ಸ್ ಇವರ ಉಸ್ತುವಾರಿಯಲ್ಲಿ ಬದುಕು ಕಟ್ಟೋಣ ಬನ್ನಿ ತಂಡದ ಸದಸ್ಯರ ಸಹಕಾರದಲ್ಲಿ ಕಿಟ್ ತಯಾರಿ ಕೆಲಸ ತುಂಬಾ ಅಚ್ಚುಕಟ್ಟಾಗಿ ನಡೆಯುತ್ತಿದೆ.
ಇದೆ ತಿಂಗಳ 23 ರ ಗುರುವಾರ ಬೆಳಿಗ್ಗೆ 7 ಗಂಟೆಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಉಜಿರೆಯ ರತ್ನವರ್ಮ ಕ್ರೀಡಾಂಗಣದಲ್ಲಿ ಸಂಸದ ನಳಿನ್ ಕುಮಾರ್ ಕಟೀಲು,ಉಸ್ತುವಾರಿ ಸಚಿವ ಕೋಟ,ಶ್ರೀನಿವಾಸ ಪೂಜಾರಿ, ಅರ್ ಎಸ್ ಎಸ್ ದಕ್ಷಿಣ ಪ್ರಾಂತ ಸಹ ಕಾರ್ಯವಾಹ ಪ್ರಕಾಶ್ ಪಿ ಎಸ್, ಮಂಗಳೂರು ವಿಭಾಗ ಕಾರ್ಯವಾಹ, ನಾ. ಸೀತಾರಾಮ್, ಬಿ ಜೆ.ಪಿ ಜಿಲ್ಲಾಧ್ಯಕ್ಷ ಸುದರ್ಶನ್, ಶರತ್ ಕೃಷ್ಣ ಪಡುವೆಟ್ನಾಯ ಉಜಿರೆ ಉಪಸ್ಥಿತಿಯಲ್ಲಿ ಚಾಲನೆ ನೀಡಲಿರುವರು ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದರು.
ಗೃಹರಕ್ಷಕ ದಳ, ರಿಕ್ಷಾ ಚಾಲಕರಿಗೆ, ಹಾಗೂ ಸಂಕಷ್ಟದಲ್ಲಿರುವ ತಾಲೂಕಿನ 241 ಬೂತ್ ಗೆ ತಲಾ 100 ಕಿಟ್ ಗಳಂತೆ ವಿತರಣಾ ಕಾರ್ಯಕ್ರಮ ನಡೆಯಲಿದ್ದು ಪ್ರತೀ ಬೂತ್ ಮಟ್ಟದಿಂದ ಒಂದು ವಾಹನದಲ್ಲಿ 2 ಜನ ಸ್ವಯಂ ಸೇವಕರು ಬಂದು ವಯಕ್ತಿಕ ಅಂತರ ಕಾಯ್ದು ಈ ಕಿಟ್ ಉಜಿರೆಯಿಂದ ಪಡೆದುಕೊಂಡು ತಮ್ಮ ತಮ್ಮ ಬೂತ್ ಗಳಲ್ಲಿ ಈ ಮೊದಲೇ ಅರ್ಹ ಫಲಾನುಭವಿಗಳ ಗುರುತಿಸಿ ಅವರ ಪಟ್ಟಿ ತಯಾರಿಸಿದ್ದು ಆ ಪ್ರಕಾರ ವಿತರಿಸುವಂತೆ ವ್ಯವಸ್ಥೆಯನ್ನು ಮಾಡಲಾಗಿದೆ . ವಿತರಣೆಯಲ್ಲಿ ಯಾವುದೆ ಗೊಂದಲ ಆಗದ ರೀತಿಯಲ್ಲಿ ಮುಂಜಾಗರೂಕತೆ ಕ್ರಮ ವಹಿಸಿಕೊಂಡು ವ್ಯವಸ್ಥಿತ ರೀತಿಯಲ್ಲಿ ಈ ಕಿಟ್ ವಿತರಣೆಯಾಗಲಿದೆ ಎಂದು ಶಾಸಕ ಹರೀಶ್ ಪೂಂಜ ತಿಳಿಸಿದರು.