- Advertisement -
- Advertisement -
ಮಂಗಳೂರು, ಏಪ್ರಿಲ್ 17: ನಾಡಿನ ಧರ್ಮದೇಗುಲ ಧರ್ಮಸ್ಥಳ ಮಂಜುನಾಥಸ್ವಾಮಿ ದೇವಾಲಯ ಮೂರು ಪ್ರಕಟಣೆಯನ್ನು ಹೊರಡಿಸಿದೆ. ಈ ಬಗ್ಗೆ ಪತ್ರಿಕಾ ಜಾಹೀರಾತನ್ನೂ ನೀಡಲಾಗಿದೆ. ಈಗಾಗಲೇ, ಸೌರಮಾನ ಯುಗಾದಿಯ ವೇಳೆ, ಕ್ಷೇತ್ರದಲ್ಲಿ ನಡೆಯುವ ವಿಷು ಮಾಸದ ಜಾತ್ರೆಯನ್ನು ರದ್ದು ಪಡಿಸಲಾಗಿದೆ ಎಂದು ಶ್ರೀಕ್ಷೇತ್ರದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆಯವರು ಪ್ರಕಟಣೆಯಲ್ಲಿ ತಿಳಿಸಿದ್ದರು.
ಕ್ಷೇತ್ರದಿಂದ ಹೊರಡಿಸಲಾದ ಮೂರು ಹೊಸ ಮೂರು ಪ್ರಕಟಣೆಗಳು ಇಂತಿವೆ:
- ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯಕ್ಷಗಾನ ಮಂಡಳಿಯ ತಿರುಗಾಟವನ್ನು ಕಳೆದ 24 ದಿನಗಳಿಂದ ಸ್ಥಗಿತಗೊಳಿಸಲಾಗಿದೆ. ಈಗಿನ ಸಂದರ್ಭವನ್ನು ಗಮನದಲ್ಲಿರಿಸಿಕೊಂಡು ಈ ಸಾಲಿನ ತಿರುಗಾಟವನ್ನು ರದ್ದು ಪಡಿಸಲು ನಿಶ್ಚಿಯಿಸಲಾಗಿದೆ. ಮುಂದಿನ ವರ್ಷದ ಕಾರ್ಯಕ್ರಮಗಳ ಬಗ್ಗೆ ಸೇವಾಕರ್ತರೊಂದಿಗೆ ಸಮಾಲೋಚಿಸಿ ನಿರ್ಧರಿಸಲಾಗುವುದು.
- ಶ್ರೀ ಧರ್ಮಸ್ಥಳದಲ್ಲಿ ಇದೇ ಬರುವ 29ನೇ ಏಪ್ರಿಲ್, 2020ರ ಬುಧವಾರದಂದು ಸಾಮೂಹಿಕ ವಿವಾಹ ಸಮಾರಂಭವನ್ನು ನಿಗದಿ ಪಡಿಸಲಾಗಿತ್ತು. ಸದ್ಯದ ಲಾಕ್ ಡೌನ್ ಪರಿಸ್ಥಿತಿಯಲ್ಲಿ ಈ ವರ್ಷದ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ರದ್ದು ಪಡಿಸಲಾಗಿದೆ.
- ಶ್ರೀ ಧರ್ಮಸ್ಥಳದಿಂದ ಪ್ರಕಟಿಸಲಾಗುತ್ತಿರುವ ಮಂಜುವಾಣಿ ಮತ್ತು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ಪ್ರಕಟಗೊಳ್ಳುತ್ತಿರುವ ನಿರಂತರ ಪತ್ರಿಕೆಗಳ ಪ್ರಕಟಣೆ ಹಾಗೂ ವಿತರಣೆಗೆ ತೊಡಕಾಗಿರುವುದರಿಂದ ಮುಂದಿನ ಮೇ ತಿಂಗಳಿನ ಪತ್ರಿಕೆಗಳನ್ನು ಪ್ರಕಟಿಸಲಾಗುವುದಿಲ್ಲ.
- Advertisement -