ಜಿಮ್ ಮುಗಿಸಿ ಮನೆಗೆ ಮರಳಿದ ಕೆಲವೇ ಕ್ಷಣಗಳಲ್ಲಿ ರಾಷ್ಟ್ರಮಟ್ಟದ ಪ್ರಸಿದ್ಧ ಬಾಡಿ ಬಿಲ್ಡರ್ ಸುಶೀಲ್ ಕುಮಾರ್ (26) ಹಠಾತ್ತನೆ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ದಾವಣಗೆರೆಯ ಕೆ.ಟಿ.ಜಿ. ನಗರದಲ್ಲಿ ಮಂಗಳವಾರ ರಾತ್ರಿ ನಡೆದಿದೆ.
ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡು, ಮುಂದಿನ ದಿನಗಳಲ್ಲಿ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ದೇಶವನ್ನು ಪ್ರತಿನಿಧಿಸಲು ಕಠಿಣ ತಾಲೀಮು ನಡೆಸುತ್ತಿದ್ದ ಅವರು, ಜಿಮ್ ಮುಗಿಸಿ ಬಂದ ಬೆನ್ನಲ್ಲೇ ತೀವ್ರ ಅಸ್ವಸ್ಥಗೊಂಡು ಕುಸಿದು ಬಿದ್ದಿದ್ದಾರೆ. ತಕ್ಷಣವೇ ಆತಂಕಗೊಂಡ ಕುಟುಂಬಸ್ಥರು ಅವರನ್ನು ಆಸ್ಪತ್ರೆಗೆ ಕರೆದೊಯ್ದರಾದರೂ, ಅವರು ದಾರಿ ಮಧ್ಯದಲ್ಲೇ ಕೊನೆಯುಸಿರೆಳೆದಿದ್ದಾರೆ. ರಕ್ತದೊತ್ತಡ ದಿಢೀರನೆ ಕುಸಿದಿದ್ದರಿಂದಲೇ ಅವರಿಗೆ ಹೃದಯಾಘಾತ ಸಂಭವಿಸಿರಬಹುದು ಎಂದು ವೈದ್ಯರು ಶಂಕಿಸಿದ್ದಾರೆ.
“ಯುವಕರು ಜೀವನದಲ್ಲಿ ಏನನ್ನಾದರೂ ಸಾಧಿಸಿ ಎತ್ತರಕ್ಕೆ ಬೆಳೆಯಬೇಕು” ಎಂದು ಸದಾ ಪ್ರೇರೇಪಿಸುತ್ತಾ, ನಿತ್ಯ ಹತ್ತಾರು ಯುವಕರಿಗೆ ಫಿಟ್‌ನೆಸ್ ತರಬೇತಿ ನೀಡುತ್ತಿದ್ದ ಸುಶೀಲ್ ಅವರ ಈ ಅಕಾಲಿಕ ಮರಣವು ಅವರ ಕುಟುಂಬ, ಸ್ನೇಹಿತರು ಹಾಗೂ ಕ್ರೀಡಾ ವಲಯದಲ್ಲಿ ತೀವ್ರ ಆಘಾತ ಮತ್ತು ಕಂಬನಿಗೆ ಕಾರಣವಾಗಿದೆ.


