ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶುಕ್ರವಾರ ಮತ್ತೆ ಎರಡು ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. ಆತಂಕಕಾರಿ ವಿಚಾರ ಎಂದರೆ ಕೊರೊನಾ ಹಾಟ್ ಸ್ಪಾಟ್ ಆಗಿರುವ ಫಸ್ಟ್ ನ್ಯೂರೋ ಆಸ್ಪತ್ರೆಯ ನಂಟು ಇವರಿಬ್ಬರೂ ಹೊಂದಿರುವುದು ದೃಢವಾಗಿದೆ.
ಬಂಟ್ವಾಳ ದ 69 ವರ್ಷದ ವೃದ್ಧ ಮತ್ತು ಮಂಗಳೂರು ಬೋಳೂರಿನ 62 ವರ್ಷದ ವೃದ್ಧನಿಗೆ ಸೋಂಕು ತಗುಲಿರುವುದು ದೃಢವಾಗಿದೆ. ಬಂಟ್ವಾಳ ದ 69 ವರ್ಷದ ವೃದ್ಧನೂ ಏ.19 ರಂದು ಕೊರೊನಾಕ್ಕೆ ಬಲಿಯಾದ ಮಹಿಳೆಯ ಸಂಬಂಧಿ ಹಾಗೂ ನೆರೆಮನೆಯವರಾಗಿದ್ದಾರೆ. ರೋಗಿ ಸಂಖ್ಯೆ P-309 ದ್ವಿತೀಯ ಸಂಪರ್ಕದಿಂದ ವೃದ್ದನಿಗೆ ಸೋಂಕು ತಗುಲಿರುವುದು ಖಚಿತವಾಗಿದೆ.
63 ವರ್ಷದ ವೃದ್ದ ಬೋಳಾರ ನಿವಾಸಿ ಗುರುವಾರವಷ್ಟೇ ಪಾಸಿಟಿವ್ ಆದ ವೃದ್ದೆ ಪತಿ ಎಂದು ತಿಳಿದುಬಂದಿದೆ. ಇವರಿಬ್ಬರನ್ನು ನಗರದ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಮುಂದುವರಿದಿದೆ.
ಈ ಕುರಿತಂತೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು, ರಾಜ್ಯದಲ್ಲಿ ಇಂದು ವಿವಿಧ ಜಿಲ್ಲೆಗಳಲ್ಲಿ 24 ಜನರಿಗೆ ಹೊಸದಾಗಿ ಕೊರೋನಾ ವೈರಸ್ ಸೋಂಕು ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ. ಹೀಗಾಗಿ ಸೋಂಕಿತರ ಸಂಖ್ಯೆ ರಾಜ್ಯದಲ್ಲಿ 589ಕ್ಕೆ ಏರಿಕೆಯಾಗಿರುವುದಾಗಿ ತಿಳಿಸಿದೆ.
ಅಂದಹಾಗೇ ಇಂದು ಮಂಡ್ಯ ಜಿಲ್ಲೆಯಲ್ಲಿ ಎಂಟು ಜನರಿಗೆ, ಬೆಳಗಾವಿಯ ರಾಯಭಾಗದ ಮೂವರಿಗೆ, ವಿಜಯಪುರದಲ್ಲಿ ಒಬ್ಬರಿಗೆ, ದಕ್ಷಿಣ ಕನ್ನಡದಲ್ಲಿ ಇಬ್ಬರಿಗೆ, ದಾವಣಗೆರೆಯ ಆರು ಜನರಿಗೆ, ಚಿಕ್ಕಬಳ್ಳಾಪುರದಲ್ಲಿ ಒಬ್ಬರಿಗೆ, ಕಲಬುರ್ಗಿಯಲ್ಲಿ ಇಬ್ಬರಿಗೆ ಹಾಗೂ ಹುಬ್ಬಳ್ಳಿ-ಧಾರವಾಡದಲ್ಲಿ ಒಬ್ಬರಿಗೆ ಕೊರೋನಾ ವೈರಸ್ ಸೋಂಕು ದೃಢಪಟ್ಟಿದೆ. ಈ ಮೂಲಕ ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 589ಕ್ಕೆ ಏರಿಕೆಯಾಗಿದೆ.
ಇದುವರೆಗೆ ಕೊರೋನಾ ಸೋಂಕಿನಿಂದಾಗಿ ರಾಜ್ಯದಲ್ಲಿ 22 ಜನರು ಸಾವನ್ನಪ್ಪಿದ್ದಾರೆ ಕೊರೋನಾ ಪೀಡಿತರಾಗಿದ್ದಂತ 251 ಜನರು ಸಂಪೂರ್ಣವಾಗಿ ಗುಣಮುಖರಾಗುವ ಮೂಲಕ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.