ಮಂಗಳೂರು: ಇಲ್ಲಿನ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಕ್ರಿಕೆಟ್ ಬೆಟ್ಟಿಂಗ್‌ನಲ್ಲಿ ತೊಡಗಿದ್ದ 14 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮೂಡುಬಿದಿರೆ ಠಾಣಾ ವ್ಯಾಪ್ತಿಯ ಅಲಂಗಾರುವಿನಲ್ಲಿ ಬೆಳುವಾಯಿ ಗ್ರಾಮದ ನವೀದ್ (30)ಅನ್ನು ವಶಕ್ಕೆ ಪಡೆಯಲಾಗಿದ್ದು, ಕಂಫರ್ಟ್ ರೋನ್ 247 ಮೊಬೈಲ್ ಆ್ಯಪ್ ಬಳಸಿ ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿದ್ದ ಆರೋಪದ ಮೇಲೆ ಈತ ಸೇರಿದಂತೆ ಪಡುಮಾರ್ನಾಡು ಗ್ರಾಮದ ಉಮೇಶ್ (40) ಹಾಗೂ ಪ್ರಸಾದ್ ದೇವಾಡಿಗ (35) ಅವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಮಾರ್ಪಾಡಿ ಒಂಟಿಕಟ್ಟೆಯಲ್ಲಿ ಬೆಟ್ಟಿಂಗ್‌ನಲ್ಲಿ ತೊಡಗಿದ್ದ ಆರೋಪಿ ಅಲಂಗಾರು ಗ್ರಾಮದ ಸುಖೇಶ್ ಆಚಾರ್ಯ (33) ಹಾಗೂ ಪಲಕಳದ ಪುರಂದರ ಕುಲಾಲ್, ಪಡುಮಾರ್ನಾಡು ಗ್ರಾಮದ ಉಮೇಶ್ (40)ಅವರನ್ನು ಕೂಡ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ವೆಬ್‌ಸೈಟ್ ಒಂದನ್ನು ಬಳಸಿ ಕ್ರಿಕೆಟ್ ಬೆಟ್ಟಿಂಗ್ ಆಡುತ್ತಿದ್ದ ಬಜಪೆ ಠಾಣಾ ವ್ಯಾಪ್ತಿಯ ತೆಂಕಎಡಪದವು ಗ್ರಾಮದ ಮಡಪ್ಪಾಡಿಯಲ್ಲಿ ಮೂವರನ್ನು ವಶಕ್ಕೆ ಪಡೆಯಲಾಗಿದೆ. ಅವರಿಂದ ಮೂರು ಮೊಬೈಲ್ ಹಾಗೂ 74,500 ನಗದು ಜಪ್ತಿ ಮಾಡಲಾಗಿದ್ದು, ತೆಂಕ ಎಡಪದವು ಗ್ರಾಮದ ಜಯಂತ ಪೂಜಾರಿ (41), ದೇವದಾಸ ಪೂಜಾರಿ (34) ಹಾಡೂ ರಮೇಶ್ ಪೂಜಾರಿ (48) ಆರೋಪಿಗಳೆಂದು ತಿಳಿದು ಬಂದಿದೆ.
ಬಡಗ ಉಳಿಪಾಡಿ ಗ್ರಾಮದ ಗಂಜಿಮಠದಲ್ಲಿ ಕ್ರಿಕೆಟ್ ಬೆಟ್ಟಿಂಗ್ ನಲ್ಲಿ ನಿರತರಾಗಿದ್ದ ಆರೋಪಿ ಪ್ರವೀಣ್ ಅವರನ್ನು ವಶಕ್ಕೆ ಪಡೆಯಲಾಗಿದೆ. ಆತನಿಂದ ಒಂದು ಮೊಬೈಲ್ ಹಾಗೂ 12, 400 ನಗದನ್ನು ಜಪ್ತಿ ಮಾಡಲಾಗಿದೆ. ಈ ಪ್ರಕರಣದ ಇನ್ನೊಬ್ಬ ಆರೋಪಿ ಧನು ಇರುವೈಲ್ ಎಂಬಾತನನ್ನು ವಶಕ್ಕೆ ಪಡೆಯಬೇಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೂಲ್ಕಿ ಠಾಣಾ ವ್ಯಾಪ್ತಿಯ ಕಾರ್ನಾಡಿನಲ್ಲಿ ಕಾನಕಟ್ಟಿ ನಿವಾಸಿ ಕಲ್ಲಪ್ಪ ಬಜಂತ್ರಿ (52)ಅವರನ್ನು ವಶಕ್ಕೆ ಪಡೆದು ಆತನಿಂದ 12, 100 ಹಾಗೂ ಮೊಬೈಲ್ ಅನ್ನು ಜಪ್ತಿ ಮಾಡಲಾಗಿದೆ. ಇನ್ನು ಇದೇ ಠಾಣೆಯ ವ್ಯಾಪ್ತಿಯ ಹಳೆಯಂಗಡಿಯಲ್ಲಿ ಇಂದ್ರೇಶ್ (28) ಎಂಬಾತನನ್ನು ವಶಕ್ಕೆ ಪಡೆದು ಆತನಿಂದ 72, 400 ನಗದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.


