ಕಾರ್ಕಳ:ಕಾರ್ಕಳದ ಸರಕಾರಿ ಆಸ್ಪತ್ರೆಗೆ ಇತ್ತೀಚಿಗೆ ಹೆರಿಗೆಗೆಂದು ಬಂದ ಗರ್ಭಿಣಿ ಮಹಿಳೆಯ ಜೊತೆ ವೈದ್ಯರು ನಡೆದುಕೊಂಡ ರೀತಿಯನ್ನು ಮತ್ತು ಶಾಸಕರ ನಿರ್ಲಕ್ಷ್ಯವನ್ನು ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ವಾಗ್ಲೆ ಕಟುವಾಗಿ ಟೀಕಿಸಿದ್ದಾರೆ.
ಪತ್ರಿಕಾ ಪ್ರಕಟಣೆಯಲ್ಲಿ ಅವರು “ಕಾರ್ಕಳದ ಆಸ್ಪತ್ರೆಯೊಂದರಲ್ಲಿ ಹೆರಿಗೆಗೆಂದು ಬಂದಿದ್ದ ಮಹಿಳೆಯೊಬ್ಬರಿಗೆ ಆಸ್ಪತ್ರೆಗೆ ಸೇರಿಸಿಕೊಳದೆ ಹಿಂದಕ್ಕೆ ಕಳುಹಿಸಿದ ಘಟನೆ ಅಮಾನವೀಯ. ಎಂತಹಾ ತುರ್ತುಪರಿಸ್ಥಿತಿಯಲ್ಲೂ ಅರೋಗ್ಯ ವೈದ್ಯಕೀಯ ಸೇವೆಗಳು ಅಭಾದಿತವಾಗಿ ನಡೆಯಬೇಕೆಂಬುದು ನಿಯಮ.
ಅದಕ್ಕೆ ಸರಿಯಾಗಿ ಈ ದಿನಗಳಲ್ಲಿ ಎದುರಾಗಿರುವ ಕೊರೋನಾ ಮಹಾಮಾರಿಯನ್ನು ಹೊಡೆದೋಡಿಸಲು ಅದೆಷ್ಟೋ ವೈದ್ಯರು ದಾದಿಯರು ಹಾಗೂ ಸಿಬ್ಬಂದಿಗಳು ತಮ್ಮ ಜೀವದ ಹಂಗು ತೊರೆದು ಕಾರ್ಯಪ್ರವೃತ್ತರಾಗಿರುವುದನ್ನು ನಾವು ತಿಳಿದುಕೊಂಡಿದ್ದೇವೆ.ಹೀಗಿರುವಾಗ ಕಾರ್ಕಳ ಆಸ್ಪತ್ರೆಯ ವೈದ್ಯರ ಈ ತೆರನಾದ ವರ್ತನೆಯು ಇಡೀ ವೈದ್ಯಲೋಕವನ್ನೇ ತಲೆತಗ್ಗಿಸುವಂತೆ ಮಾಡಿದೆ.
ವೈದ್ಯೋ ನಾರಾಯಣಾ ನಾರಾಯಣಾ ಹರೀ ಎಂಬಂತೆ ವೈದ್ಯರನ್ನು ಭಗವಂತನ ರೂಪದಲ್ಲಿ ಕಾರ್ಕಳದ ವೈದ್ಯರು ಮಹಿಳೆಯ ಅದರಲ್ಲೂ ತುಂಬು ಗರ್ಭಿಣಿ ಮಹಿಳೆಯ ಬಗ್ಗೆ ನಿರ್ದಯಿಯಾಗಿ ವರಿಸಿದ್ದು ಅತ್ಯಂತ ಖಂಡನೀಯವಾಗಿದೆ.
ಸಂತ್ರಸ್ತ ಗರ್ಭಿಣಿ ಮಹಿಳೆ ಸಹಾಯಕ್ಕಾಗಿ ವಿನಂತಿಸಿಕೊಂಡಾಗಲೂ ನಂಬರ್ 1 ಶಾಸಕರೆಂದು ಕರೆಸಿಕೊಳ್ಳುವ ಅವರ ವಿನಂತಿಯನ್ನು ಕಿವಿಗೆ ಹಾಕಿಕೊಳ್ಳದೆ ಕಟುಕರಾಗಿ ವರ್ತಿಸಿದ್ದೇಕೆ? ಅವರೂ ಒಬ್ಬ ತಾಯಿಯ ಮಗನಲ್ಲವೇ? ಹೆರಿಗೆ ಅನ್ನುವುದು ಯಾವುದೇ ಕಾರಣಕ್ಕಾಗಿ ಮುಂದೂಡುವ ವಿಷಯವಲ್ಲ ಎಂಬ ಸಾಮಾನ್ಯ ಜ್ಞಾನವೂ ಶಾಸಕರಿಗೆ ಇಲ್ಲವಾಯಿತೇ? ಕೊರೋನಾ ವಿಚಾರದಲ್ಲಿ ಅತ್ಯಂತ ದಕ್ಷತೆಯಿಂದ ಪ್ರಾಮಾಣಿಕತೆಯಿಂದ ಜಿಲ್ಲಾಧಿಕಾರಿಗಳ ಹೆಗಲಿಗೆ ಹೆಗಲು ಕೊಟ್ಟು ದುಡಿದಿರುವ ಆರೋಗ್ಯಾಧಿಕಾರಿಗಳು ಈ ಬಗ್ಗೆ ಸೂಕ್ಷ್ಮ ವಿಚಾರಣೆ ನಡೆಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಗೀತಾ ವಾಗ್ಲೆ ಒತ್ತಾಯಿಸಿದ್ದಾರೆ.