ಸುಳ್ಯ: ವೃದ್ಧೆಯ ಹೆಸರಿನಲ್ಲಿ ಸಾಲ ಮಾಡಿ ಮೊಬೈಲ್ ಖರೀದಿಸಿ ಯುವಕ ಪರಾರಿಯಾಗಿರುವ ಘಟನೆ ಸುಳ್ಯದಲ್ಲಿ ನಡೆದಿದೆ.
ಸುಳ್ಯ ಗಾಂಧಿನಗರ ನಾವೂರಿನ ವೃದ್ಧೆ ಕದೀಜ ಅವರನ್ನು ಪಕ್ಕದ ಮನೆ ಯುವಕ ಹ್ಯಾರಿಸ್ ಎಂಬಾತ ಮೊಬೈಲ್ ಖರೀದಿಸಲು ಸಾಕ್ಷಿ ಹಾಕಲು ಬನ್ನಿ ಎಂದು ನಂಬಿಸಿ ಕರೆದುಕೊಂಡು ಹೋಗಿ ಸಹಿ ಹಾಕಿಸಿದ್ದಾನೆ. ಸುಳ್ಯ ಪೊಲೀಸ್ ಠಾಣೆ ಬಳಿ ಇರುವ ಮೊಬೈಲ್ ಅಂಗಡಿಗೆ ಕರೆದೊಯ್ದು 16 ಸಾವಿರ ರೂಪಾಯಿ ಬೆಲೆ ಬಾಳುವ ಮೊಬೈಲ್ ಫೋನನ್ನು ಫೈನಾನ್ಸ್ ಸಂಸ್ಥೆಯ ಮೂಲಕ ಖರೀದಿಸಿದ್ದಾನೆ.
ಫೆಬ್ರವರಿ 22, 2020ರಲ್ಲಿ ಫೋನ್ ಖರೀದಿಸಿದ್ದು ಸಾಕ್ಷಿ ನೆಪದಲ್ಲಿ ವೃದ್ದೆಯ ಆಧಾರ್ ಕಾರ್ಡ್, ಹಾಗೂ ಬ್ಯಾಂಕ್ ಪಾಸ್ ಬುಕ್ಕಿನ ದಾಖಲೆಪತ್ರಗಳನ್ನು ಪಡೆದುಕೊಂಡಿದ್ದಾನೆ. ಅವಿದ್ಯಾವಂತೆ ಆಗಿರುವ ವೃದ್ಧೆ ಈತನ ಮಾತನ್ನು ನಂಬಿ ಕೇಳಿದ ದಾಖಲೆಗಳನ್ನು ನೀಡಿದ್ದಾರೆ. ನಂತರ ಅದನ್ನು ಮೊಬೈಲ್ ಅಂಗಡಿಗೆ ನೀಡಿ ಇದು ನಮ್ಮ ತಾಯಿಯವರದೆಂದು ಹೇಳಿ ಅಂಗಡಿಯವರನ್ನು ನಂಬಿಸಿದ್ದಾನೆ. ನಂತರ ಮನೆಗೆ ತೆರಳಿದ ಕದೀಜ ರವರನ್ನು ಅಂಗಡಿಗೆ ಕರೆತಂದು ಅವರ ಭಾವಚಿತ್ರವನ್ನು ಮೊಬೈಲ್ ನಲ್ಲಿ ತೆಗೆದು ತನಗೆ ಬೇಕಾದ ಓಟಿಪಿ ನಂಬರ್ ಮುಂತಾದವುಗಳನ್ನು ತನ್ನದೇ ಬಳಿಯಿದ್ದ ಮತ್ತೊಂದು ಮೊಬೈಲ್ ಮೂಲಕ ನೀಡಿ ತನ್ನ ಎಲ್ಲಾ ಕೆಲಸ ಕಾರ್ಯಗಳನ್ನು ಮಾಡಿಸಿಕೊಂಡಿದ್ದಾನೆ.
ಇದಾದ ಬಳಿಕ ಬ್ಯಾಂಕಿಗೆ ಇಎಂಐ ಪ್ರತಿ ತಿಂಗಳು ಪಾವತಿಸದೆ ಎರಡು ತಿಂಗಳು,ಮೂರು ತಿಂಗಳು ಗಳನ್ನು ಬಿಟ್ಟು ಬಿಟ್ಟು ಪಾವತಿ ಮಾಡಿ ಮೊಬೈಲ್ ಗೆ ನೀಡಬೇಕಾದ ಹಣವನ್ನು ಪಾವತಿಸಿರುತ್ತಾನೆ.ಇದೀಗ ಒಂದು ವರ್ಷ ಕಳೆದ ನಂತರ ಕದೀಜ ಎಂಬವರ ಮೊಬೈಲಿಗೆ ಬ್ಯಾಂಕಿನಿಂದ ತಮ್ಮ ಖಾತೆಗೆ 18,346 ರೂ ಪಾವತಿಸಲು ಬಾಕಿ ಇದೆ ಎಂಬ ಮೆಸೇಜು ಬರಲು ಆರಂಭಿಸಿದೆ.ಇದರಿಂದ ಆತಂಕಗೊಂಡ ಖದೀಜರವರು ತನ್ನ ಹಿರಿಯ ಮಗಳನ್ನು ಬ್ಯಾಂಕಿಗೆ ಕಳುಹಿಸಿ ವಿಚಾರಿಸಿದಾಗ ತಾನು ಮೋಸ ಹೋಗಿರುವುದು ತಿಳಿದುಬಂದಿದೆ.
ಇನ್ನು ಮೊಬೈಲ್ ಖರೀದಿಸಿ ವಂಚಿಸಿರುವ ಯುವಕನ ಮನೆಯವರು ಕಳೆದ ಒಂದು ವರ್ಷದ ಹಿಂದೆ ನಾವೂರಿನ ಮನೆಯನ್ನು ಮಾರಾಟ ಮಾಡಿ ಬೇರೆಡೆಗೆ ಹೋಗಿದ್ದಾರೆನ್ನಲಾಗಿದೆ. ಈ ಎಲ್ಲಾ ಘಟನೆಯ ಬಗ್ಗೆ ಹ್ಯಾರಿಸ್ ನ ಮನೆಯವರಿಗೆ ತಿಳಿಸಿದರೆ ಅವರು ಸರಿಯಾಗಿ ಪ್ರತಿಕ್ರಿಯೆ ನೀಡಿಲ್ಲ ಎನ್ನಲಾಗಿದೆ.