ಕಡಬ: ಕೆಎಸ್ ಆರ್ ಟಿಸಿ ಬಸ್ ಬೈಕ್ ಗೆ ಡಿಕ್ಕಿ ಹೊಡೆದು ಯುವಕ ಸಾವನ್ನಪ್ಪಿರುವ ಘಟನೆ ಉಪ್ಪಿನಂಗಡಿ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕಡಬ ಸಮೀಪದ ಹಳೆಸ್ಟೇಷನ್ ಎಂಬಲ್ಲಿ ನಡೆದಿದೆ.
ಕಡಬ ತಾಲೂಕಿನ ಕೋಡಿಂಬಾಳ ಗ್ರಾಮದ ಉದೇರಿ ನಿವಾಸಿ ದಿ. ಶ್ರೀಧರ ಗೌಡ ಎಂಬವರ ಪುತ್ರ ಬಿಶ್ವಜಿತ್(23) ಮೃತ ಯುವಕ.
ಬಿಶ್ವಜಿತ್ ಮರ್ಧಾಳದ ಪಾಲತ್ತಡ್ಕದಲ್ಲಿ ಫ್ಯಾಬ್ರಿಕೇಷನ್ ವೃತ್ತಿ ಮಾಡುತ್ತಿದ್ದ. ಎಂದಿನಂತೆ ಕೆಲಸ ಮುಗಿಸಿ ಮನೆಗೆ ಹೊರಟು ಕಡಬ ಕಡೆ ಬೈಕಿನಲ್ಲಿ ಬರುತ್ತಿದ್ದಾಗ ಹಳೆಸ್ಟೇಷನ್ ಬಳಿ ಸುಬ್ರಹ್ಮಣ್ಯ ಕಡೆಗೆ ತೆರಳುತ್ತಿದ್ದ KSRTC ಬಸ್ ಒಮ್ನಿ ಕಾರೊಂದನ್ನು ಹಿಂದಿಕ್ಕಿ ಹೋಗುವ ಭರದಲ್ಲಿ ಎದುರಿನಿಂದ ಬರುತ್ತಿದ್ದ ಬಿಶ್ವಜಿತ್ ಚಲಾಯಿಸುತ್ತಿದ್ದ ಬೈಕ್ ಗೆ ಡಿಕ್ಕಿ ಹೊಡೆದಿದೆ. ಕಡಬ ಆಸ್ಪತ್ರೆಗೆ ಸಾಗಿಸುವ ಹಾದಿ ಮಧ್ಯೆ ಮೃತಪಟ್ಟಿದ್ದಾನೆ.
ಇದೇ ವೇಳೆ ಒಮ್ನಿ ಕಾರಿಗೂ ಹಾನಿಯಾಗಿದೆ. ಮೃತ ಯುವಕನಿಗೆ ತಾಯಿ, ಸಹೋದರ ಹಾಗೂ ಸಹೋದರಿ ಇದ್ದಾರೆ. ಘಟನಾ ಸ್ಥಳಕ್ಕೆ ಕಡಬ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.


