
ಮಂಗಳೂರು: ಮಹಿಳೆಯೋರ್ವರು ರಸ್ತೆ ದಾಟುತ್ತಿದ್ದ ಸಂದರ್ಭದಲ್ಲಿ ಕಾರೊಂದು ಢಿಕ್ಕಿಯಾಗಿ, ಮಹಿಳೆ ದೂರಕ್ಕೆ ಹಾರಿ ಬಿದ್ದ ಘಟನೆ ಬಂಟ್ವಾಳ ತಾಲೂಕಿನ ಸಜಿಪಮುನ್ನೂರು ಗ್ರಾಮದ ದಾಸರಗುಡ್ಡೆ ಎಂಬಲ್ಲಿ ನಡೆದಿದ್ದು, ಈ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಗಾಯಗೊಂಡ ಮಹಿಳೆಯನ್ನು ಉಳ್ಳಾಲ ತಾಲೂಕಿನ ಬೋಳಿಯಾರು ಗ್ರಾಮದ ಭಾರತಿ (48) ಎಂದು ಗುರುತಿಸಲಾಗಿದೆ.
ಘಟನೆಯ ವಿವರ: ಭಾರತಿ ಅವರು ತನ್ನ ಮಗಳು ದೀಪಶ್ರೀ ಎಂಬವರೊಂದಿಗೆ ಗುಳಿಗಜ್ಜ ಕಟ್ಟೆಗೆ ಕಾಣಿಕೆ ಹಾಕಲೆಂದು ಸಜಿಪಮೂಡಕ್ಕೆ ಬಂದಿದ್ದರು. ಈ ವೇಳೆ, ಮೆಲ್ಕಾರ್- ಮುಡಿಪು ರಾಜ್ಯ ಹೆದ್ದಾರಿ ರಸ್ತೆಯನ್ನು ದಾಟಲು ಯತ್ನಿಸುತ್ತಿದ್ದಾಗ ಮೆಲ್ಕಾರ್ ಕಡೆಯಿಂದ ಮುಡಿಪುಗೆ ತೆರಳುತ್ತಿದ್ದ ಕಾರು ಡಿಕ್ಕಿ ಹೊಡೆದು ಅಪಘಾತಕ್ಕೀಡಾಗಿದೆ.
ಗಾಯಗೊಂಡ ಮಹಿಳೆಯನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಬಂಟ್ವಾಳ ಸಂಚಾರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾರು ಡಿಕ್ಕಿಯಾದ ರಭಸಕ್ಕೆ ಮಹಿಳೆ ದೂರಕ್ಕೆ ಹಾರಿ ಬಿದ್ದಿದ್ದಾರೆ.


